ಉಡುಪಿ : ಯಕ್ಷ ಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥವಾಗಿ ನೀಡುವ ದತ್ತಿ ಪುರಸ್ಕಾರಕ್ಕೆ ಶ್ರೀ ದೇವದಾಸ್ ರಾವ್ ಕೂಡ್ಲಿಯವರು ಆಯ್ಕೆಯಾಗಿದ್ದು, ಈ ಪ್ರಶಸ್ತಿಯನ್ನು ದಿನಾಂಕ 05-05-2023ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ವಿತರಿಸಲಾಗುವುದು. ಈ ಕಾರ್ಯಕ್ರಮವು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ನಡೆಯಲಿದೆ.
ನಾಗಪ್ಪಯ್ಯ ಕೂಡ್ಲಿ ಹಾಗೂ ಗಿರಿಜಮ್ಮ ದಂಪತಿಗಳ ಸುಪುತ್ರರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾರ್ಕೂರು ಮತ್ತು ಉಳ್ತೂರಿನಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಎನ್.ಜೆ.ಸಿ. ಬಾರ್ಕೂರು ಇಲ್ಲಿ ಪಡೆದಿರುತ್ತಾರೆ. ಯಕ್ಷಗಾನ ಶಿಕ್ಷಣವನ್ನು 1975-1976ರಲ್ಲಿ ಯಕ್ಷಗಾನ ಕೇಂದ್ರ ಉಡುಪಿ ಇಲ್ಲಿ ಪಡೆದಿರುತ್ತಾರೆ.
ಶ್ರೀಯುತರು ಕಮಲಶಿಲೆ ಮೇಳ, ಮಾರಣಕಟ್ಟೆ ಮೇಳ, ಉಪ್ಪಿನಕುದ್ರು ಶ್ರೀ ಗಣೇಶ ಗೊಂಬೆಯಾಟ ತಂಡದಲ್ಲಿ ಹಲವು ವರ್ಷಗಳಿಂದ ಮದ್ದಲೆಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಹೆಗ್ಗೋಡಿನ ನೀನಾಸಂ ತಿರುಗಾಟದಲ್ಲಿ 2 ವರ್ಷ ಅನುಭವ ಹೊಂದಿದ ಇವರು ಮೈಸೂರಿನ ರಂಗಾಯಣ ತಂಡದಲ್ಲಿ, ಶ್ರೀಮಯ ಯಕ್ಷಗಾನ ಕೇಂದ್ರ ಗುಣವಂತೆಯಲ್ಲಿ, ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕನಾಗಿ ಹಾಗೂ ಕೇಂದ್ರದ ವ್ಯವಸಾಯಿ ಮೇಳವಾದ ಯಕ್ಷರಂಗ (ಬ್ಯಾಲೆ)ದಲ್ಲಿ ಮದ್ದಲೆಗಾರನಾಗಿ ಸೇವೆ ಸಲ್ಲಿಸಿದ್ದಾರೆ.
ಕೂಡ್ಲಿಯವರು ಭಾರತವಲ್ಲದೇ ಜರ್ಮನಿ, ಸ್ಕಾಟ್ಲೆಂಡ್, ಸ್ವೀಡನ್, ಸ್ವಿಜರ್ಲ್ಯಾಂಡ್, ಬೆಲ್ಜಿಯಂ, ಸಿಂಗಾಪುರ, ಐರ್ಲೆಂಡ್ ಮತ್ತು ಆಸ್ಟ್ರೇಲಿಯ ಮುಂತಾದ ದೇಶಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ.
ಪ್ರಸ್ತುತ ಯಕ್ಷಾಂತರಂಗ ಕೋಟ ತಂಡದಲ್ಲಿ ಕಲಾವಿದ, ಯಶಸ್ವಿ ಕಲಾವೃಂದ ತೆಕ್ಕಟ್ಟೆ ಮತ್ತು ಮಹಾಲಿಂಗೇಶ್ವರ ಕಲಾರಂಗ ವಡ್ದರ್ಸೆಯಲ್ಲಿ ಅಧ್ಯಾಪಕ, ಉದ್ಯಾವರ ಹಿಂದೂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 11 ವರ್ಷಗಳಿಂದ ಯಕ್ಷಗಾನ ತರಬೇತುಗೊಳಿಸಿ ಪ್ರದರ್ಶನ ಕೊಟ್ಟುದಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲಿ ಹಾಗೂ ಉಡುಪಿ ಕಲಾರಂಗದ ಯಕ್ಷ ಶಿಕ್ಷಣದ ತರಬೇತುದಾರರಾಗಿದ್ದಾರೆ.
ಇವರ ಸಾಧನೆಗೆ ದಿ. ಮಣೂರು ಮಹಾಬಲ ಕಾರಂತ ಸಂಸ್ಮರಣ ಸನ್ಮಾನ, ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ದರ್ಸೆಯಲ್ಲಿ ಸನ್ಮಾನ, ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾಸಂಘ ಕೆಳಾರ್ಕಳಬೆಟ್ಟು ಇವರಿಂದ ಸನ್ಮಾನ
ಯಕ್ಷ ಮಿತ್ರರು ಬಸ್ರೂರು ಇವರಿಂದ ಯಕ್ಷಶಿಲ್ಪಿ ಬಸ್ರೂರು ಗೋಪಾಲಾಚಾರ್ಯ ಪ್ರಶಸ್ತಿ, ಭಾವನೆ ಫೌಂಡೇಶನ್ (ರಿ.) ಹಾವಂಜೆ ಇವರಿಂದ ‘ಯಕ್ಷ ಕಲಾ ಸಿಂಧು – 2018’ ಪ್ರಶಸ್ತಿ ನೀಲಾವರ ರಾಯರುಗಳ ಸಂಸ್ಮರಣೆಯ ಪ್ರಯುಕ್ತ ಹೆರಂಜೆಯಲ್ಲಿ ಸನ್ಮಾನ ಹಾಗೂ ಯಕ್ಷ ಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಇವರಿಂದ ‘ಯಕ್ಷ ಸೌರಭ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ಲಭಿಸಿವೆ.