ಮಡಿಕೇರಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಮಡಿಕೇರಿ ನಗರದಲ್ಲಿರುವ ಸಂಸ್ಥೆಯ ಸ್ಕೌಟ್ಸ್ ಗೈಡ್ಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ಸ್ಕೌಟ್ಸ್, ಗೈಡ್ಸ್, ಬುಲ್ ಬುಲ್, ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿಗಳಿಗಾಗಿ ವೇಷ ಭೂಷಣಗಳೊಂದಿಗೆ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ ನಡೆಯಿತು.
ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿದ ಗೀತಾ ಗಾಯನವು ಪ್ರೇಕ್ಷಕರ ಗಮನ ಸೆಳೆಯಿತು. ಮಕ್ಕಳು ದೇಶಭಕ್ತಿ ಗೀತೆ ಹಾಡಿ ಸಂತಸಪಟ್ಟರು. ಗೀತಾ ಗಾಯನ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, “ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಭಾತೃತ್ವ, ರಾಷ್ಟ್ರೀಯ ಪ್ರಜ್ಞೆ ಹಾಗೂ ರಾಷ್ಟ್ರೀಯ ಭಾವೈಕ್ಯತೆ, ಬೆಳೆಸುವ ಉದ್ದೇಶದಿಂದ ದೇಶಭಕ್ತಿ ಗೀತೆಯಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇಂದಿನ ದಿನಗಳಲ್ಲಿ ರಾಷ್ಟ್ರೀಯ ಭಾವೈಕ್ಯ, ಕೋಮುಸೌಹಾರ್ದ, ರಾಷ್ಟ್ರೀಯ ಪ್ರಜ್ಞೆ, ಪರಿಸರ ಕಾಳಜಿ, ವೈಚಾರಿಕತೆ ಬೆಳಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅನೇಕ ಮಹತ್ವದ ಕಾರ್ಯ ಮಾಡುತ್ತಿದ್ದು ಅದರಲ್ಲಿ ಗೀತಾ ಗಾಯನ ಸ್ಪರ್ಧೆ ಕೂಡ ಬಹಳ ಮುಖ್ಯವಾದುದು. ಮಡಿಕೇರಿಯಲ್ಲಿ ದಿನಾಂಕ 23 ನವೆಂಬರ್ 2025ರಂದು ಮೈಸೂರು ವಿಭಾಗಮಟ್ಟದ ಗೀತಾ ಗಾಯನ ಸ್ಪರ್ಧೆಯು ನಡೆಯಲಿದ್ದು, ಎಂಟು ಜಿಲ್ಲೆಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.

ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಮಂಜುಳಾ ಚಿತ್ರಾಪುರ ಮಾತನಾಡಿ, “ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ದೇಶದ ಹಿರಿಮೆ ಸಾರುವ ದೇಶಭಕ್ತಿ ಗೀತೆಗಳಿಂದ ಆಗಾಧ ದೇಶಪ್ರೇಮ ಮೂಡುತ್ತದೆ. ನಾಡಿನ ಬಗ್ಗೆ ಅಭಿಮಾನ ಉಂಟು ಮಾಡುತ್ತದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ಮುಂದಿನ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಪ್ರದರ್ಶಿಸುವ ಮೂಲಕ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು” ಎಂದರು.
ಸಂಸ್ಥೆಯ ಸ್ಥಾನಿಕ ಆಯುಕ್ತ ಎಚ್.ಆರ್. ಮುತ್ತಪ್ಪ ಮಾತನಾಡಿ, “ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿವೆ” ಎಂದರು. ಗೀತಾ ಗಾಯನ ಸ್ಪರ್ಧೆಯ ಉದ್ದೇಶ ತಿಳಿಸಿದ ಸಂಪಾಜಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಉಷಾರಾಣಿ ಮಾತನಾಡಿ, “ದೇಶಭಕ್ತಿ ಗೀತೆಗಳ ಗಾಯನವು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ. ಇದು ಮಕ್ಕಳು ಭವಿಷ್ಯದಲ್ಲಿ ತಮ್ಮನ್ನು ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ವೇದಿಕೆ ಒದಗಿಸುತ್ತವೆ” ಎಂದರು. ವಿದ್ಯಾರ್ಥಿ ಪೋಷಕರಾದ ಶ್ರೀಲತಾ ಮಾತನಾಡಿ, “ಪೋಷಕರು ಮಕ್ಕಳ ಇಂತಹ ಸ್ಪರ್ಧೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು” ಎಂದರು.

ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ. ಪ್ರೇಮಕುಮಾರ್, ಜಿಲ್ಲಾ ಸ್ಕೌಟ್ಸ್ ತರಬೇತಿ ಅಯುಕ್ತ ಕೆ.ಯು. ರಂಜಿತ್, ಜಿಲ್ಲಾ ಗೈಡ್ ತರಬೇತಿ ಆಯುಕ್ತ ಮೈಥಿಲಿ ರಾವ್, ಜಿಲ್ಲಾ ಬುಲ್ ಬುಲ್ ಆಯುಕ್ತೆ ಡೈಸಿ ಫ್ರಾನ್ಸಿಸ್, ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಎಂ.ಎಂ. ವಸಂತಿ, ಕೋಶಾಧಿಕಾರಿ ಟಿ.ಎಂ. ಮುದ್ದಯ್ಯ, ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ, ಕಮೀಷನರ್ ತರಬೇತುದಾರ ಕೆ.ಬಿ. ಗಣೇಶ್, ತೀರ್ಪುಗಾರರಾದ ಲಕ್ಷ್ಮಿ ಈಶ್ವರ್ ಭಟ್, ವೀಣಾ ಹೊಳ್ಳ, ಗೈಡ್ಸ್ ಶಿಕ್ಷಕಿ ಬಿ.ಜಿ. ಜಾಜಿ, ಸ್ಕೌಟ್ಸ್, ಗೈಡ್ಸ್ ನ ಶಿಕ್ಷಕರು, ಶಿಕ್ಷಕಿಯರು, ಸ್ಕೌಟ್ಸ್, ಗೈಡ್ಸ್, ಬುಲ್ ಬುಲ್, ಲ್ ಬುಲ್, ರೇಂಜರ್ ಮತ್ತು ರೋವರ್ಸ್ ನ ವಿದ್ಯಾರ್ಥಿಗಳು, ಪೋಷಕರು ಇದ್ದರು, ಜಿಲ್ಲೆಯ ಪ್ರತಿ ತಾಲೂಕುಗಳಿಂದ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದ ವಿದ್ಯಾರ್ಥಿಗಳು ಭಾಗವಹಿಸಿ ಗೀತೆ ಹಾಡಿದರು. ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿಗಳು ಜನಪದ ಗೀತೆ ಹಾಡಿದರು. ವಿವಿಧ ಶಾಲೆಗಳಿಂದ ಆಗಮಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
