ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶೇಷ ಕಾರ್ಯಪಡೆ ಮಂಗಳೂರು ವತಿಯಿಂದ ವಿಶೇಷ ಕಾರ್ಯಪಡೆ ಸಿಬ್ಬಂದಿಗೆ ಆಯೋಜಿಸಲಾಗಿರುವ 20 ದಿನಗಳ ತುಳು ಕಲಿಕಾ ಶಿಬಿರ ಮತ್ತು ಸಂಸ್ಕೃತಿ ಪರಿಚಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ದಿನಾಂಕ 28 ಅಕ್ಟೋಬರ್ 2025ರಂದು ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರ ಪೊಲೀಸ್ ಆಯುಕ್ತ ಮತ್ತು ವಿಶೇಷ ಕಾರ್ಯಪಡೆಯ ಡಿ. ಐ. ಜಿ. ಪಿ. ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ ಕರ್ತವ್ಯ ನಿರ್ವಹಿಸುವ ಸ್ಥಳದ ಸ್ಥಳೀಯ ಭಾಷೆ ಕಲಿತಾಗ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇದು ಕರ್ತವ್ಯ ನಿರ್ವಹಣೆಗೂ ಸಾಕಷ್ಟು ನೆರವಾಗಲಿದೆ. ದ.ಕ ಮತ್ತು ಉಡುಪಿ ಭಾಗದಲ್ಲಿ ಸ್ಥಳೀಯ ಭಾಷೆಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಹಾಗಾಗಿ ಇಲ್ಲಿಗೆ ಕರ್ತವ್ಯಕ್ಕೆ ಬರುವ ಪೊಲೀಸರಿಗೆ ಕೆಲವೊಂದು ಸಮಸ್ಯೆಯಾಗುತ್ತದೆ. ನಾವು ನಮ್ಮವರು ಎನ್ನುವ ಭಾವನೆ ಬರುವುದಿಲ್ಲ. ಸ್ಥಳೀಯರು ಕೂಡಾ ನಮ್ಮವರು ಎಂದು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಭಾಷೆಯನ್ನು ಕಲಿಯುವುದರಿಂದ ಸಂಸ್ಕೃತಿಯ ಪರಿಚಯವೂ ಆಗಿ, ನಾವೂ ಅವರೊಳಗೆ ಒಬ್ಬರಾಗುತ್ತೇವೆ. ಇದು ಅಪರಾಧ ತನಿಖೆಯ ಸಂದರ್ಭದಲ್ಲೂ ಇಲಾಖೆಗೆ ನೆರವಾಗುತ್ತದೆ. ಜಿಲ್ಲೆಯಲ್ಲಿ ಶೇ.98ರಷ್ಟು ಮಂದಿ ಅವರ ಪಾಡಿಗೆ ಅವರು ಇದ್ದಾರೆ. ಏನೇ ಸಮಸ್ಯೆ ಬಂದರೂ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಶೇ.2ರಲ್ಲಿ ಶೇ.1ರಷ್ಟು ಮಂದಿ ಅಪರಾಧಿಕ ಮನಸ್ಥತಿಯವರು. ಇವರು ಶೇ.98ರಷ್ಟಿರುವ ಜನರನ್ನು ಹೆದರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದ ಶೇ.1 ಪೊಲೀಸರಾಗಿದ್ದು, ಅವರು ಶೇ.98ರಷ್ಟು ಮಂದಿ ಧೈರ್ಯ ಹೇಳುವ ಕೆಲಸ ಮಾಡಬೇಕು” ಎಂದರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು. ವಿಶೇಷ ಕಾರ್ಯಪಡೆ ಪ್ರಭಾರ ಪೊಲೀಸ್ ಉಪ ಅಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಮಿಥುನ್ ಎಚ್.ಎನ್., ನಾಗೇಶ್ ಉದ್ಯಾವರ, ರವಿಪ್ರಕಾಶ್ ಉಪಸ್ಥಿತರಿದ್ದರು.

 
									 
					