ಪೆರಿಯ : ಬೇಕಲದ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಐದನೇಯ ದೀಪಾವಳಿ ಸಂಗೀತೋತ್ಸವದ ಹತ್ತನೇ ದಿನ ಸಂಜೆ ದೀಪ ಪ್ರಭೆಯಲ್ಲಿ ಶ್ರುತಿಸಾಗರ್ ಅವರ ಕೊಳಲು ಕಛೇರಿ ಅತ್ಯಂತ ಸುಶ್ರಾವ್ಯವಾಗಿತ್ತು. ತಮ್ಮ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರನ್ನು ಬೆರಗುಗೊಳಿಸುವ ಶ್ರುತಿಸಾಗರ್ ಇವರು ತೋಡಿ ರಾಗದಲ್ಲಿ ‘ಶ್ರೀಕೃಷ್ಣ ಭಜಮಾನ ಸಾ’ ಎಂಬ ಕೃತಿಯನ್ನು ವಾಚಿಸಿದರು. ಪಕ್ಕ ವಾದ್ಯದಲ್ಲಿ ಕೇಶವ ಮೋಹನ್ ಕುಮಾರ್ ಪಿಟೀಲು, ಬಾಂಬೆ ಗಣೇಶ್ ಮೃದಂಗ, ಶ್ರೀಜಿತ್ ವೆಳ್ಳತ್ತೂರು ಘದಂ, ಪಯ್ಯನ್ನೂರು ಗೋವಿಂದ ಪ್ರಸಾದ್ ಮುಖಶಂಕು ನುಡಿಸಿದರು.

ದೀಪಾವಳಿ ಸಂಗೀತೋತ್ಸವದ ಹನ್ನೊಂದನೇ ದಿನ ದಿನಾಂಕ 30 ಅಕ್ಟೋಬರ್ 2025ರಂದು ಗೋಶಾಲಾ ನಂದಿ ಮಂಟಪದಲ್ಲಿ ವಿದ್ಯಾ ಕಲ್ಯಾಣರಾಮನ್ ಇವರಿಂದ ಸಂಗೀತ ಕಛೇರಿ, ಅನಂತಕೃಷ್ಣನ್ ಮತ್ತು ಶ್ರೇಯಾ ಅನಂತ್ ಇವರಿಂದ ಪಿಟೀಲು ಕಛೇರಿ, ಸುಕನ್ಯಾ ರಾಮ್ ಗೋಪಾಲ್ ಇವರಿಂದ ಘಟ ತರಂಗ ಕಛೇರಿ, ರೋಹಿಣಿ ಶ್ರೀನಾಥ್ ಮತ್ತು ಶ್ರುತಿ ಕನ್ನನ್ ಬಾಲಕೃಷ್ಣನ್ ಮತ್ತು ರಮಣವೇ ಬಾಲಕೃಷ್ಣನ್ ಇವರಿಂದ ಸಂಗೀತ ಕಛೇರಿ ನಡೆಯಿತು. ಸುಕನ್ಯಾ ರಾಮ್ ಗೋಪಾಲ್ ಇವರ ಘಟ ತರಂಗಂ ಎಂಬ ವಿಶೇಷ ಕಾರ್ಯಕ್ರಮ ಗೋಶಾಲೆಗೆ ಬಂದ ಭಕ್ತರನ್ನು ಮೋಡಿ ಮಾಡಿತು. ಯೋಗೇಶ್ ಶರ್ಮಾ, ವಿದ್ಯಾ ಕಲ್ಯಾಣರಾಮನ್, ರೋಹಿಣಿ ಶ್ರೀನಾಥ್ ಮತ್ತು ಶ್ರುತಿ ಜಯದೇವ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಇಂದು ಸಂಗೀತೋತ್ಸವದಲ್ಲಿ ಕರ್ನಾಟಕ ಸಂಗೀತ ಗುರುಗಳಾದ ಟಿ.ವಿ. ಗೋಪಾಲಕೃಷ್ಣನ್ ಇವರ ಸಂಗೀತ ಕಚೇರಿ ಗೋಶಾಲಾ ನಂದಿ ಮಂಟಪದಲ್ಲಿ ನಡೆಯಲಿದೆ. ಅನಿರುದ್ಧ್ ಸುಬ್ರಮಣ್ಯಂ ಇವರ ಮೊದಲ ಸಂಗೀತ ಕಚೇರಿಯನ್ನು ನಡೆಸಿಕೊಡಲಿದ್ದು, ಪಿಟೀಲು ವಾದಕ ವಿಠ್ಠಲ್ ರಾಮಮೂರ್ತಿ ಪಿಟೀಲು ಸಂಗೀತ ಕಚೇರಿ ನೀಡಲಿದ್ದಾರೆ. ಜಯಂತ್ ಮತ್ತು ಮೈಸೂರು ಚಂದನ್ ಕುಮಾರ್ ಇವರ ಕೊಳಲು ಸಂಗೀತ ಕಚೇರಿ ಹಾಗೂ ಚೆನ್ಕೊಟ್ಟೈ ಹರಿಹರ ಸುಬ್ರಮಣ್ಯಂ ಇವರ ನಾಮಸಂಕೀರ್ತನವೂ ನಡೆಯಲಿದೆ.
 
									 
					