ಉಡುಪಿ : ಶ್ರೀಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ದ್ಯುತಿಪರ್ವ ಯಕ್ಷ ಟ್ರಸ್ಟ್ ಕುಂದಾಪುರ ಇವರ ಸಂಯುಕ್ತ ಸಹಭಾಗಿತ್ವದಲ್ಲಿ ದಿನಾಂಕ 24 ಅಕ್ಟೋಬರ್ 2025ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ಹಮ್ಮಿಕೊಂಡ ಐದು ದಿನಗಳ ಯಕ್ಷಗಾನ ಪ್ರದರ್ಶನ ‘ಯಕ್ಷ ಪಂಚಮಿ-2025’ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಈ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು “ಯಕ್ಷಗಾನ ಕಲೆಗೆ ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಇಂದಿನ ಪ್ರಶಸ್ತಿ ಪ್ರದಾನ ಯಕ್ಷ ಕಲೆಗೆ ವಿಶೇಷ ಉತ್ತೇಜನ ಕೊಟ್ಟ ಹಾಗೆ. ತಲ್ಲೂರು ಶಿವರಾಮ ಶೆಟ್ಟಿ ಎಂದರೆ ಯಕ್ಷಗಾನ ಎಂಬುವುದೇ ಅಲ್ಲಿ ಪ್ರಸಿದ್ದಿಯಾಗಿದೆ. ಯಕ್ಷಗಾನ ಕಲೆಗೆ ಅವರು ನೀಡುತ್ತಿರುವ ಉತ್ತೇಜನ ಪ್ರೋತ್ಸಾಹ ಹೀಗೆ ಮುಂದುವರೆಯಲಿ. ನಮ್ಮ ನಾಡಿನ ಹೆಮ್ಮೆಯ ಕಲೆ ಯಕ್ಷಗಾನ ಚಿರಸ್ಥಾಯಿಯಾಗಲಿ. ಎಲ್ಲಾ ಕಲೆಗಳಿಗೆ ಶ್ರೀಕೃಷ್ಣ ಮಠ ಪ್ರೋತ್ಸಾಹ ನೀಡುತ್ತಾ ಬಂದಿದೆ. ಅದರಲ್ಲೂ ಪ್ರಮುಖವಾಗಿ ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಯ ದೃಷ್ಟಿಯಿಂದ ಸಂಘ ಸಂಸ್ಥೆಗಳ ಪ್ರೋತ್ಸಾಹ ಅತ್ಯಗತ್ಯ. ಅದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಗಾನ ಕಲೆಗೆ ಸಿಗುತ್ತಿರುವ ವಿಶೇಷ ಪ್ರೋತ್ಸಾಹವನ್ನು ಕಂಡಾಗ ಸಂತೋಷವಾಗಿದೆ. ಅವರ ಕಲಾಸೇವೆ ಇದೇ ರೀತಿ ಮುಂದುವರಿಯಲಿ. ನಮ್ಮ ನಾಡಿನ ಯಕ್ಷಗಾನ ಕಲೆಯ ಪ್ರಸಿದ್ಧಿ ಚಿರಸ್ಥಾಯಿಯಾಗಲಿ” ಎಂದು ಅವರು ಹಾರೈಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನಕ್ಕೆ ಇಂದು ಶಿಕ್ಷಕರು, ಇಂಜೀನಿಯರ್‌ಗಳು, ವೈದ್ಯರು ಸೇರಿದಂತೆ ಸುಶಿಕ್ಷಿತ ಬುದ್ದಿ ಜೀವಿಗಳು ಬರುತ್ತಿದ್ದಾರೆ. ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಇದು ಸ್ವಾಗತಾರ್ಹವಾದರೂ, ಯಕ್ಷಗಾನವನ್ನು ಸಂಪ್ರದಾಯ ಚೌಕಟ್ಟಿನೊಳಗೆ ಬೆಳೆಸಿದ ಹಿರಿಯ ಕಲಾವಿದರನ್ನು ಗುರುತಿಸಿ, ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹಿರಿಯ ವೇಷಧಾರಿ ಅಜ್ರಿ ಗೋಪಾಲ ಗಾಣಿಗ ಇವರಿಗೆ ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್ ಯಕ್ಷ ಪ್ರಶಸ್ತಿಯನ್ನು ನೀಡಿದ್ದೇವೆ” ಎಂದರು.
ಉದ್ಯಮಿ ಗೋಪಾಲ ಸಿ. ಬಂಗೇರ ಮಾತನಾಡಿ “ಯಕ್ಷಗಾನ ಎಂಬುದು ಸರ್ವಾಂಗೀಣ ಸುಂದರ ಕಲೆ. ನೃತ್ಯ, ವೇಷಭೂಷಣ, ಅಭಿನಯದಿಂದ ಸಂಪನ್ನವಾಗಿದೆ. ಸುಸಂಸ್ಕೃತ ಕಲೆಯ ಉನ್ನತಿಗೆ ಶ್ರಮಿಸುತ್ತಿರುವ ಪ್ರಸ್ತುತ ರಾಜ್ಯ ಯಕಗಾನ ಅಕಾಡೆಮಿಯ ಅಧ್ಯಕ್ಷರಾಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಅಭಿನಂದನಾರ್ಹರು. ಸರಕಾರ ಅಕಾಡೆಮಿಗೆ ನೀಡುವ ಅನುದಾನವನ್ನು ಕಲೆಯ ಬೆಳವಣಿಗೆಗೆ ಹಾಗೂ ಕಲಾವಿದರಿಗೆ ಮುಟ್ಟಿಸಬೇಕು ಎನ್ನುವ ಅವರ ತುಡಿತ, ದಕ್ಷತೆ, ಪ್ರಾಮಾಣಿಕ ಪ್ರಯತ್ನ ಪ್ರಶಂಸನೀಯ” ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಅಜ್ರಿ ಗೋಪಾಲ ಗಾಣಿಗ ಇವರಿಗೆ ‘ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್ ಯಕ್ಷ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅಜ್ರಿ ಗೋಪಾಲ ಗಾಣಿಗರು, “ಯಕ್ಷಗಾನ ಅಕಾಡೆಮಿಯನ್ನು ಕಲಾವಿದರಿಗೆ ಮುಟ್ಟುವಂತಹ ಕಾರ್ಯ ಮಾಡುತ್ತಿರುವ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟರ ಕಾರ್ಯ ಮಾದರಿಯಾಗಿದೆ. 60ರ ಪ್ರಾಯದಲ್ಲಿ ಯಕ್ಷಗಾನವನ್ನು ಕಲಿತು, 400ಕ್ಕೂ ಅಧಿಕ ಪ್ರದರ್ಶನವನ್ನು ನೀಡಿದಲ್ಲದೆ ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿದ ನಿಸ್ವಾರ್ಥ ಸೇವೆಗೆ ಅವರಿಗೆ ಅಕಾಡೆಮಿಯ ಅಧ್ಯಕ್ಷ ಸ್ಥಾನ ಒಲಿದಿದೆ. ಅವರಿಂದ ಕಲೆ, ಹಾಗೂ ಕಲಾವಿದರಿಗೆ ಇನ್ನಷ್ಟು ಉತ್ತೇಜನ ಸಿಗಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಠದ ದಿವಾನರಾದ ನಾಗರಾಜ ಆಚಾರ್ಯ, ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್‌ನ ರವೀಂದ್ರ ಶೆಟ್ಟಿ, ನಿವೃತ್ತ ರೈಲ್ವೆ ಉದ್ಯೋಗಿ ರಘುನಾಥ ನಾಯಕ್ ಶುಭ ಹಾರೈಸಿದರು. ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯ ಪ್ರವರ್ತಕ ರಂಜನ್ ಕುಮಾರ್ ಶೆಟ್ಟಿ ವಕ್ವಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ, ಪುತ್ತಿಗೆ ಮಠದ ರಮೇಶ್ ಭಟ್ ಉಪಸ್ಥಿತರಿದ್ದರು.
 
									 
					