ಮಂಗಳೂರು : ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭವು ದಿನಾಂಕ 01 ನವೆಂಬರ್ 2025ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ್ ಶೆಣೈಯವರು ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ಹೇಳುತ್ತಾ ರಾಷ್ಟ್ರೀಯ ಮಟ್ಟದ ವಿಶ್ವ ಕೊಂಕಣಿ ಪುರಸ್ಕಾರ ಕಾರ್ಯಕ್ರಮಕ್ಕೆ ವಿವಿಧ ಸಂಘ ಸಂಸ್ಥೆಗಳಿಂದ ಒಟ್ಟಾಗಿ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಕೊಂಕಣಿ ಹೋರಾಟಗಾರ ಶ್ರೀ ಪುಂಡಳೀಕ ಎನ್. ನಾಯಕ್ ಇವರಿಗೆ ‘ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ’, ಶ್ರೀ ಶಶಿಕಾಂತ ಪೂನಾಜಿ ಇವರ ‘ಗುಠೆಣಿ’ಯೆಂಬ ಕವಿತಾ ಕೃತಿಗೆ ‘ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ’, ಪ್ರಾಧ್ಯಾಪಕ ಶ್ರೀ ಬಾಲಚಂದ್ರ ಗಾಂವಕಾರ ಇವರ ‘ಪನವತ’ಯೆಂಬ ಸಾಹಿತ್ಯ ಕೃತಿಗೆ ‘ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಕೃತಿ ಪುರಸ್ಕಾರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ವಿಲಿಯಂ ಡಿಸೋಜಾರವರು ಈ ಪ್ರಶಸ್ತಿಯ ಮಹಾಪೋಷಕರಾದ ಶ್ರೀ ಟಿ.ವಿ. ಮೋಹನದಾಸ ಪೈ ಇವರ ಉಪಕಾರ ಸ್ಮರಣೆ ಸಂದೇಶ ನೀಡಿದರು.
ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿಯನ್ನು ಕುದ್ಮುಲ್ ರಂಗರಾವ ಸ್ಥಾಪಿತ ಈಶ್ವರಾನಂದ ಮಹಿಳಾ ಸೇವಾಶ್ರಮ ಸಂಸ್ಥೆಗೆ (ಅನಾಥಾಲಯ ಸೇವೆ) ಹಾಗೂ ಇನ್ನೊಂದು ಪ್ರಶಸ್ತಿಯನ್ನು ಹೊಸಬೆಳಕು ಸೇವಾ ಸಂಸ್ಥೆಗೆ (ನಿರ್ಗತಿಕರ ಸೇವೆ) ಪ್ರದಾನ ಮಾಡಲಾಯಿತು. ಐದು ಪುರಸ್ಕಾರಗಳು ತಲಾ ಒಂದು ಲಕ್ಷ ರೂಪಾಯಿಗಳ ಸಮ್ಮಾನಧನ ಮತ್ತು ಫಲಕ, ಫಲ ತಾಂಬೂಲಗಳನ್ನು ಒಳಗೊಂಡಿತು.
ಮುಖ್ಯ ಅತಿಥಿಗಳಾಗಿ ಕೇರಳ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ಎನ್. ನಗರೇಶ ಇವರು ಎಲ್ಲಾ ಐದು ಪ್ರಶಸ್ತಿ ಪ್ರದಾನ ಮಾಡಿ ಮಾತೃ ಭಾಷೆ ಕೊಂಕಣಿಯ ಪೋಷಣೆ ಮತ್ತು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ವಿಶ್ವ ಕೊಂಕಣಿ ಕೇಂದ್ರ ಮಾಡುವ ಪ್ರಯತ್ನ, ಚಟುವಟಿಕೆಗಳು ಶ್ಲಾಘನೀಯವಾಗಿವೆ ಎಂದು ಅಭಿಮಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಕುಂದ ಪ್ರಭು, ರೋಕಿ ಮಿರಾಂದ, ಎರಿಕ್ ಒಝೇರಿಯೊ, ಮಾಧವಿ ಸರದೇಸಾಯಿ, ಗೋಕುಲದಾಸ ಪ್ರಭು, ಉಳ್ಳಾಲ ಮೋಹನ ಕುಮಾರ ಈ ಆರು ಮಂದಿ ಕೊಂಕಣಿ ಸಾಧಕರ ಭಾವಚಿತ್ರಗಳು ವಿಶ್ವ ಕೊಂಕಣಿ ಕೀರ್ತಿಮಂದಿರದಲ್ಲಿ ಅನಾವರಣಗೊಂಡವು. ಡಾ. ಕಸ್ತೂರಿ ಮೋಹನ್ ಪೈ, ಚಂದ್ರಿಕಾ ಮಲ್ಯ ಹಾಗೂ ವೆಂಕಟೇಶ ಎನ್. ಬಾಳಿಗಾ ಇವರು ಈ ಸಾಧಕರ ಕಿರು ಪರಿಚಯ ನೀಡಿದರು. ಶ್ರೀಮತಿ ರಾಜಶ್ರೀ ತಂಡದವರು ನಡೆಸಿಕೊಟ್ಟ ಭರತನಾಟ್ಯ ನೃತ್ಯ ಪ್ರದರ್ಶನವು ಸಭಿಕರ ಮನಸೂರೆಗೊಂಡವು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ರಮೇಶ್ ಡಿ. ನಾಯಕ್, ಕೋಶಾಧಿಕಾರಿ ಬಿ.ಆರ್. ಭಟ್, ಟ್ರಸ್ಟಿಗಳಾದ ಶಕುಂತಲಾ ಆರ್. ಕಿಣಿ, ವತಿಕಾ ಕಾಮತ ಪೈ, ಗಿಲ್ಬರ್ಟ್ ಡಿಸೋಜಾ, ಕುಡ್ಪಿ ಜಗದೀಶ ಶೆಣೈ, ಎಸ್. ಶಿವಶಂಕರ ನಾಯಕ್, ಆಡಳಿತ ಅಧಿಕಾರಿ ಡಾ. ಬಿ. ದೇವದಾಸ ಪೈ, ಮಾಂಡ್ ಸೋಬಾಣ್ ಸಂಸ್ಠೆಯ ಅಧ್ಯಕ್ಷ ಲೂಯಿ ಪಿಂಟೊ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಹಿರಿಯ ಪದಾಧಿಕಾರಿಗಳು ಹಾಗೂ ಪ್ರಮುಖ ಗಣ್ಯರು, ಕರ್ನಾಟಕ, ಕೇರಳ, ಗೋವಾ ರಾಜ್ಯಗಳಿಂದ ಬಂದಿರುವ ಮಾತೃಭಾಷಾಭಿಮಾನಿಗಳು, ಸಾಹಿತ್ಯಾಸಕ್ತರು ಭಾಗವಹಿಸಿದರು. ಕೇಂದ್ರದ ಕಾರ್ಯದರ್ಶಿ ಡಾ. ಕೆ. ಮೋಹನ ಪೈ ಧನ್ಯವಾದ ಸಮರ್ಪಣೆ ಮಾಡಿ, ಡಾ. ವಿಜಯಲಕ್ಷ್ಮೀ ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿ, ಕೊಂಕಣಿ ಶಿಕ್ಷಕಿ ಐಷ್ವರ್ಯಲಕ್ಷ್ಮಿ ಭಟ್ ಇವರು ಪ್ರಶಸ್ತಿ ಸನ್ಮಾನಿತರ ಪರಿಚಯವನ್ನು ಹೇಳಿದರು. ಸಾಧನಾ ಬಳಗ ತಂಡದ ಮಕ್ಕಳು ಕೊಂಕಣಿ ಅಭಿಮಾನ ಗೀತೆಯನ್ನು ಹಾಡಿದರು.
