ಬೆಳಗಾವಿ : ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರ (ಹಳೆ ರೀಝ ಟಾಕೀಜ್)ದಲ್ಲಿ ದಿನಾಂಕ 02 ನವೆಂಬರ್ 2025 ರವಿವಾರದಂದು ಬೆಂಗಳೂರಿನ ರಂಗಶಂಕರ ಸಹಯೋಗದೊಂದಗೆ ಬೆಳಗಾವಿಯ ರಂಗಸಂಪದ ತಂಡದವರು ಅಭಿನಯಿಸಿರುವ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನಗೊಂಡಿತು.

 ನಕ್ಷತ್ರ ಯಾತ್ರಿಕರು ಇದೊಂದು ವಿಭಿನ್ನ ರೀತಿಯ ನಾಟಕ. ಹಲವಾರು ನಾಟಕಗಳಿಂದ ಪ್ರೇಕ್ಷಕರನ್ನು ನಕ್ಕು ಹಗುರಾಗಿಸಿದ ರಂಗ ಸಂಪದ ತಂಡ ‘ನಕ್ಷತ್ರ ಯಾತ್ರಿಕರು’ ನಾಟಕದಿಂದ ಅತ್ತು ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳುವಂತೆ ಮಾಡುತ್ತದೆ. ಹೊಟ್ಟೆಪಾಡಿಗಾಗಿ ಅಲಿಯುವ ಜನರ ದಾರುಣ ಜೀವನ ಚಿತ್ರಣವೇ ‘ನಕ್ಷತ್ರ ಯಾತ್ರಿಕರು’ ನಾಟಕದ ಮುಖ್ಯ ಕಥಾವಸ್ತು.

ಕಾರ್ಮಿಕ ಕುಟುಂಬದ ಹೊಟ್ಟೆ ನೋವಿನಿಂದ ಬಳಲುತ್ತಿರುವ ಹೆಣ್ಣಿನ ಶರಣವ್ವನ ಪಾತ್ರವನ್ನು ಮಾಡಿದ ಉಜ್ವಲಾ ಪವಾರ ರಂಗದ ಮೇಲೆ ಬಂದೊಡನೆ ಇವರದ್ದು ಅಭಿನಯವೋ ನಿಜವಾಗಲೂ ನೋವನ್ನು ಅನುಭವಿಸುತ್ತಿರುವವರೋ ಎಂಬ ಸಂಶಯವನ್ನುಂಟು ಮಾಡುವಂಥ ಗಂಭೀರ ವಾತಾವರಣ ನಿರ್ಮಿಸಿ ಬಿಡುತ್ತಾರೆ. ಈ ಪಾತ್ರದ ಸಾವನ್ನು ಸೂಚ್ಯವಾಗಿ ಹೇಳಬಹುದಿತ್ತಾದರೂ ಅದೇಕೋ ನಿರ್ದೇಶಕರು ಬೆಳೆಸಿದಂತೆ ಅನ್ನಿಸುತ್ತದೆ.

ಪಾತ್ರದಲ್ಲಿ ಕಾಣಿಸಿಕೊಂಡ ಸ್ನೇಹಾ ಕುಲಕರ್ಣಿಯವರ ಅಭಿನಯ ತುಂಬ ನೈಜದಿಂದ ಕೂಡಿದ್ದು, ಗಂಭೀರ ವಾತಾವರಣವನ್ನು ತಕ್ಕ ಮಟ್ಟಿಗೆ ತಿಳಿಗೊಳಿಸುತ್ತ ಹೋಗುತ್ತದೆ. ಬಾಲನಟ ವರದ ದೇಶಪಾಂಡೆ ಎಲ್ಲರ ಗಮನ ಸೆಳೆಯುತ್ತಾನೆ. ಕಲಾವಿದರಾದ ಅರವಿಂದ ಪಾಟೀಲ, ಪ್ರಸಾದ ಕಾರಜೋಳ, ವಿನಯ ಕುಲಕರ್ಣಿ, ನಿರ್ಮಲಾ ಬಟ್ಟಲ, ಆರೂಷ ಕುಲಕರ್ಣಿ, ಯೋಗೇಶ ದೇಶಪಾಂಡೆ, ಮಂಜುನಾಥ ಕಲಾಲ, ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕೊನೆಯವರೆಗೂ ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ನಾಟಕ ಯಶಸ್ವಿಯಾಗಿದೆ.

ನಾಟಕದ ರಚನೆ ಸಂಧ್ಯಾ ಎಸ್. ಇವರದಾಗಿದ್ದು, ಶ್ರೀಪತಿ ಮಂಜನಬೈಲು ಇವರ ಸಂಗೀತವಿದೆ. ಸವಿತಾ ಭೈರಪ್ಪ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ನಾಟಕಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ. ಇಲ್ಲಿ ಸಂದರ್ಭಕ್ಕೆ ಬರುವ ಹಳೆಯ ಚಲನಚಿತ್ರ ಹಾಡುಗಳು ತಲೆದೂಗುವಂತೆ ಮಾಡುತ್ತವೆ. ನೆಳಲು ಬೆಳಕನ್ನು ಇವರೇ ನೀಡಿದ್ದಾರೆ.
									 
					