ಬೆಂಗಳೂರು : ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯು ಅರು ಕ್ರಿಯೇಶನ್ಸ್ ಮತ್ತು ಬುಕ್ ಬ್ರಹ್ಮದ ಸಹಯೋಗದೊಂದಿಗೆ ಆಯೋಜಿಸಿದ್ದ 15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19 ಅಕ್ಟೋಬರ್ 2025ರಂದು ಬೆಂಗಳೂರಿನ ಚಾಮರಾಜಪೇಟೆಯ ಕ.ಸಾ.ಪ. ಆವರಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ “ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಬರಬೇಕು. ಯುವಜನರು ಸಾಹಿತ್ಯಾಸಕ್ತಿ ಬೆಳೆಸಿಕೊಂಡರೆ ಮಾತ್ರ ಸಾಹಿತ್ಯದ ಉಳಿವು. ಸರ್ಕಾರವು ಪುಸ್ತಕಗಳನ್ನು ಕೊಂಡು ಪ್ರಕಾಶಕರು ಮತ್ತು ಲೇಖಕರನ್ನು ಬೆಂಬಲಿಸಬೇಕು” ಎಂದು ಅಭಿಪ್ರಾಯಪಟ್ಟರು.
ಹೊಸ ಬರಹಗಾರರ ಕೃತಿಗಳನ್ನು ಪ್ರಕಟಿಸುತ್ತಿರುವ ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ ಪ್ರಯತ್ನವು ಸ್ವಾಗತಾರ್ಹ ಎಂದು ಲೇಖಕಿ ಮೇಘನ ಸುಧೀಂದ್ರ ಇವರು ಅಭಿಪ್ರಾಯ ಹಂಚಿಕೊಂಡರೆ, ಪ್ರಕಟಣೆಯಾಗಿರುವ ಕೃತಿಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿಯೂ, ಆಸಕ್ತಿದಾಯಕವೂ ಆಗಿವೆಯೆಂದು ಕೃತಿ ಪರಿಚಯ ಮಾಡಿದ ಲೇಖಕಿ ನಿವೇದಿತಾ ಎಚ್.ರವರು ಅಭಿಪ್ರಾಯಪಟ್ಟರು.
ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯು ಉಷಾ ರಾಣಿ ಟಿ.ಎನ್., ಗಿರಿಜಾ ರಾಜ್ ಎಲ್., ಶಂಕರ ರಾವ್ ಎನ್., ಸಿಂಧು ಹರಿತಸ್, ಗಾಯತ್ರಿ ಮೂರ್ತಿ, ಎಚ್.ವಿ. ಶ್ರೀಪ್ರಕಾಶ್, ರಘುರಾಂ ಎನ್.ವಿ. ಎಂಬ ಏಳು ಲೇಖಕರ ರಚನೆಯ ಖೋ ಕಾದಂದರಿ ‘ಅದೃಶ್ಯ ಬೇರುಗಳು’, ಡಾ. ಪ್ರದೀಪ್ ಬೇಲೂರು ಅವರ ಕಥಾ ಸಂಕಲನ ‘ಸುಡೋಕು’, ಶ್ರೀ ಸ.ಹರೀಶ್ ಅವರ ಕಥಾ ಸಂಕಲನ ‘ಅಮ್ಮ ಅಂದ್ರೆ ಭೂಮಿ’, ಆಶಾ ರಘು ಅವರ ‘ಹೂಮಾಲೆಯಾದ ಆಂಡಾಳು’ ಎಂಬ ತಿರುಪ್ಪಾವೈ ಸಹಿತವಾದ ನೀಳ್ಗತೆಯನ್ನು ಲೋಕಾರ್ಪಣೆ ಮಾಡಿತು. ಇದರೊಂದಿಗೆ ಹಂದಲಗೆರೆ ಗಿರೀಶ್ ಇವರ ಎರಡು ಮರುಮುದ್ರಣದ ಕವನ ಸಂಕಲನಗಳು ಹಾಗೂ ಆಶಾ ರಘು ಇವರ ಒಂಬತ್ತು ಮರುಮುದ್ರಣದ ಕೃತಿಗಳು ಕೂಡಾ ಲೋಕಾರ್ಪಣೆಗೊಂಡವು. ಬಿಡುಗಡೆಗೊಂಡ ಎಲ್ಲಾ ಕೃತಿಗಳ ಲೇಖಕರು, ಸಮನ್ವಯ ಸಮಿತಿಯ ಶ್ರೀ ರವೀಂದ್ರ ಹಾಗೂ ಸಾಹಿತಿ ಮತ್ತು ಪ್ರಕಾಶಕಿಯಾದ ಆಶಾ ರಘು ಉಪಸ್ಥಿತರಿದ್ದರು.
