ಮೈಸೂರು : ಕರ್ನಾಟಕ ಸರ್ಕಾರದ ‘ರಂಗಾಯಣ, ಮೈಸೂರು’ ಆಧುನಿಕ ರಂಗಭೂಮಿಯ ಪ್ರತಿಷ್ಠೆಯ ರಂಗಸಂಸ್ಥೆಯಾಗಿದೆ. ಈ ಸಂಸ್ಥೆಯ ಮಹತ್ವದ ಒಂದು ರಂಗ ಯೋಜನೆ ‘ಬಹುರೂಪಿ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ’. ಈ ನಾಟಕೋತ್ಸವವನ್ನು ಪ್ರಸಕ್ತ ಸಾಲಿನಲ್ಲಿ 2026ರ ಜನವರಿ 12ರಿಂದ 18ರವರೆಗೆ ರಂಗಾಯಣದ ಆವರಣದಲ್ಲಿ ‘ಬಹುರೂಪಿ ಬಾಬಾ ಸಾಹೇಬ್’ ಎಂಬ ಶೀರ್ಷಿಕೆಯಡಿ ನಡೆಸಲು ಯೋಜಿಸಲಾಗಿದೆ. ಬಹುರೂಪಿ ಉತ್ಸವ ರಾಷ್ಟ್ರೀಯ ಮಟ್ಟದ ನಾಟಕೋತ್ಸವವಾಗಿದ್ದು, ಈ ಶೀರ್ಷಿಕೆಗೆ ಪೂರಕವಾದ ಅತ್ಯುತ್ತಮ ಗುಣಮಟ್ಟದ ರಂಗಪ್ರಯೋಗಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಬೇಕೆಂಬುದು ರಂಗಾಯಣದ ಆಶಯ.
ಈ ಹಿನ್ನೆಲೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಇವರ ಬದುಕು ಬರಹ ಹೋರಾಟಗಳನ್ನು ನೆನಪಿಸುವ ಧಮನಿತ/ಶೋಷಿತ ಸಮುದಾಯ ಕಥನಗಳ ನಾಟಕಗಳೂ ಸೇರಿದಂತೆ ಹಲವು ವೈವಿಧ್ಯಮಯ ನಾಟಕಗಳನ್ನು ಬಹುರೂಪಿಯಲ್ಲಿ ಆಯೋಜಿಸಲು ಕನ್ನಡ, ಇಂಗ್ಲೀಷ್ ಸೇರಿದಂತೆ ಭಾರತೀಯ ಇತರ ಭಾಷೆಗಳ ನಾಟಕಗಳನ್ನು ಆಹ್ವಾನಿಸಲಾಗಿದೆ ಮತ್ತು ‘ಮಕ್ಕಳ ಬಹುರೂಪಿ’ಗಾಗಿ ಮುಖ್ಯ ನಾಟಕಗಳೊಂದಿಗೆ ಮಕ್ಕಳಿಗಾಗಿ ಪ್ರದರ್ಶಿಸುವ ನಾಟಕಗಳನ್ನು ಆಹ್ವಾನಿಸುತ್ತಿದ್ದೇವೆ. ಈ ಉತ್ಸವದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ರಂಗತಂಡಗಳು ರಂಗಾಯಣದ ವೆಬ್ ಸೈಟ್ rangayanamysore.karnataka.gov.in ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ತಂಡ ಹಾಗೂ ನಾಟಕದ ವಿವರಗಳನ್ನು ಭರ್ತಿ ಮಾಡಿ, ನಾಟಕದ ಪೆನ್‌ಡ್ರೈವ್‌ನ್ನು ಲಗತ್ತಿಸಿ ದಿನಾಂಕ 25 ನವೆಂಬರ್ 2025ರೊಳಗಾಗಿ ರಂಗಾಯಣಕ್ಕೆ ತಲುಪುವಂತೆ ಕಳುಹಿಸಿಕೊಡಲು ಕೋರಿದೆ. ರಂಗಾಯಣದ ಇ-ಮೇಲ್ ವಿಳಾಸ [email protected] ಗೆ ನಾಟಕದ ಯೂಟ್ಯೂಬ್ ಲಿಂಕನ್ನೂ ಕಳುಹಿಸಬಹುದು. ಈ ಉತ್ಸವಕ್ಕೆ ಆಯ್ಕೆಯಾಗುವ ನಾಟಕ ತಂಡಗಳಿಗೆ ರಂಗಾಯಣದ ನಿಯಮಾನುಸಾರ ಗೌರವ ಸಂಭಾವನೆ, ಪ್ರಯಾಣ ವೆಚ್ಚ ಪಾವತಿಸಲಾಗುವುದು. ಸ್ಥಳೀಯ ಆತಿಥ್ಯ ವ್ಯವಸ್ಥೆಯನ್ನು ಮಾಡಲಾಗುವುದು. ಆಯ್ಕೆಯಾಗುವ ತಂಡಗಳಿಗೆ ಉಳಿದ ವಿವರಗಳನ್ನು ಪತ್ರದ ಮೂಲಕ ತಿಳಿಸಲಾಗುವುದು.
