ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ, ಸಂಗೀತ ಸಂಭ್ರಮ ಕಾರ್ಯಕ್ರಮವು ದಿನಾಂಕ 05 ನವೆಂಬರ್ 2025ರಂದು ಮಂಗಳೂರಿನ ಎಸ್.ಡಿ.ಎಂ. ಸಂಸ್ಥೆಯ ಪ್ರಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಮತ್ತು ಸಾಹಿತ್ಯ ತಜ್ಞರಾದ ಶ್ರೀ ಚಂದ್ರಶೇಖರ ದೈತೋಟ ಇವರು ಕನ್ನಡ ರಾಜ್ಯೋತ್ಸವ ಸಂದೇಶವನ್ನು ನೀಡಿದರು. ಕವಿರಾಜಮಾರ್ಗದಿಂದಾರಂಭಿಸಿ, ಕನ್ನಡ ಸಾಹಿತ್ಯದಲ್ಲಿ ಪ್ರಾಚೀನದಿಂದ ಅರ್ವಾಚೀನದವರೆಗೆ ಕಂಡುಬರುವ ವೈವಿಧ್ಯಮಯ ಸೊಗಸನ್ನು ಸವಿವರವಾಗಿ ನೀಡಿದ ಅವರು, ಕನ್ನಡ ಸಾಹಿತಿಗಳಾದ ಮಂಗರಸ, ಬಸವಪ್ಪಶಾಸ್ತ್ರಿ, ದಿನಕರ ದೇಸಾಯಿ, ಕೆ.ಎಸ್. ನರಸಿಂಹಸ್ವಾಮಿ ಮುಂತಾದ ಹಲವಾರು ಸಾಹಿತಿಗಳ ಕೊಡುಗೆಗಳನ್ನು ಶ್ಲಾಘಿಸಿದರು.


ಮಂಗಳೂರಿನ ‘ಇಂಚರ’ ತಂಡದ ಶ್ರೀಮತಿಯರಾದ ಸುಮಾ ಅರುಣ್ ಮಾನ್ವಿ, ಉಮಾ ಪಾಲಾಕ್ಷಪ್ಪ, ಅನುಪಮಾ, ವಿದ್ಯಾ ಇವರು ಸುಮಧುರವಾದ ನಾಡಭಕ್ತಿಯ ಗೀತೆಗಳನ್ನು ಹಾಡಿದರು. ಯುವ ಗಾಯಕ ವಿನಮ್ರ ಇಡ್ಕಿದು ಇವರ ಗಾಯನವು ಕಾರ್ಯಕ್ರಮಕ್ಕೆ ಇನ್ನಷ್ಟು ಸೊಬಗನ್ನು ಇತ್ತಿತು. ಸಾಹಿತಿಗಳಾದ ರಘು ಇಡ್ಕಿದು, ಸುಬ್ರಾಯ ಭಟ್, ಗಣೇಶ ಪ್ರಸಾದ ಜೀ., ಧಾರವಾಡದ ಶ್ರೀ ಗೋಗೇರಿ, ವಿಘ್ನೇಶ್ ಬಿಢೆ ಮತ್ತು ಶ್ರೀಮತಿಯರಾದ ವಿದ್ಯಾ, ಉಷಾ ಜಿ. ಜೀ. ಮುಂತಾದವರು ಕವನ, ಚುಟುಕುಗಳ ವಾಚನ ಮತ್ತು ಗಾಯನವನ್ನು ಮಾಡಿದರು. ಡಾ. ಮೀನಾಕ್ಷಿ ರಾಮಚಂದ್ರ ಇವರು ಕನ್ನಡ ನಾಡು ನುಡಿಯ ಬಗೆಗಿನ ಸ್ವರಚಿತ ಕವನವನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿದರು.


ಕ.ಸಾ.ಪ. ಮಂಗಳೂರು ಘಟಕದ ಡಾ. ಮಂಜುನಾಥ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಗಣೇಶ ಪ್ರಸಾದ ಜೀ.ಯವರು ಸ್ವಾಗತಿಸಿ, ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಡಾ. ಮುರಲಿಮೋಹನ ಚೂಂತಾರು ವಂದಿಸಿ, ಕೋಶಾಧಿಕಾರಿ ಸುಬ್ರಾಯ ಭಟ್ ಹಾಗೂ ರತ್ನಾವತಿ ಜೆ. ಬೈಕಾಡಿಯವರು ನಿರೂಪಿಸಿದರು. ಕ.ಸಾ.ಪ.ದ ಜಿಲ್ಲಾ ಪ್ರತಿನಿಧಿ ಸನತ್ ಕುಮಾರ್ ಜೈನ್, ಬೆನೆಟ್ ಅಮ್ಮನ್ನ, ಎಂ.ಟಿ. ಭಟ್, ರವೀಂದ್ರನಾಥ್ ಕೆ.ಪಿ., ಶ್ರೀಮತಿ ಸುಖಲಾಕ್ಷಿ ವೈ. ಸುವರ್ಣ, ಅರುಣ್ ಮಾನ್ವಿ ಮುಂತಾದವರು ಉಪಸ್ಥಿತರಿದ್ದರು.
