ಹಾಸನ : ಮಾಣಿಕ್ಯ ಪ್ರಕಾಶನದಿಂದ ದಿನಾಂಕ 02 ನವೆಂಬರ್ 2025ರಂದು ಹಾಸನದ ಸಂಸ್ಕೃತ ಭವನದಲ್ಲಿ ಹಮಿಕೊಂಡಿದ್ದ ರಾಜ್ಯ ಮಟ್ಟದ 10ನೇ ಕವಿಕಾವ್ಯ ಸಂಭ್ರಮ, ಕನ್ನಡ ರಾಜ್ಯೋತ್ಸವ ಹಾಗೂ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಸಿದ್ಧ ಸಾಹಿತಿ ಕೆ.ಎಸ್. ಭಗವಾನ್ “ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂದರೆ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದ ರೀತಿ ಶಿಕ್ಷಣವನ್ನು ಮಾಡಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ನೆರವಿನಿಂದ ಶೂದ್ರರು ಇಂದು ಅಕ್ಷರ ಕಲಿಯುವಂತಾಗಿದೆ. ಸಾವಿರಾರು ವರ್ಷಗಳಿಂದ ಶಿಕ್ಷಣವೆಂದರೆ ಕೇವಲ ಮೇಲ್ಜಾತಿಯವರಿಗೆ ಸೀಮಿತ ಎಂಬ ಪರಿಸ್ಥಿತಿ ಇತ್ತು. ಸಂವಿಧಾನ ಜಾರಿಯಾದ ಬಳಿಕ ಆ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಎಲ್ಲರೂ ಸ್ವಾವಲಂಬಿ, ಘನತೆಯ ಬದುಕು ಕಟ್ಟಿಕೊಳ್ಳಬೇಕೆಂದರೆ ಶಿಕ್ಷಣ ಮುಖ್ಯ. ರಾಜ್ಯದಲ್ಲಿ ಮೊದಲ ಭಾಷೆಯಾಗಿ ಕನ್ನಡ ಹಾಗೂ ದ್ವಿತೀಯ ಭಾಷೆಯಾಗಿ ಇಂಗ್ಲೀಷ್ ಜಾರಿಯಾಗಬೇಕು. ತೃತೀಯ ಭಾಷಾ ಸೂತ್ರಕ್ಕೆ ಯಾವ ಕಾರಣಕ್ಕೂ ಒಪ್ಪಬಾರದರು. ಕನ್ನಡ ಇಲ್ಲಿನ ಮೂಲ ಭಾಷೆಯಾಗಿದ್ದು ಇಂಗ್ಲೀಷ್ ವ್ಯಾವಹಾರಿಕವಾಗಿ ಅನಿವಾರ್ಯವಾಗಿದೆ. ಹಿಂದಿ ಕಲಿಯಲೇಬೇಕೆಂಬ ಕಡ್ಡಾಯ ನಿಯಮವನ್ನು ಕನ್ನಡಿಗರು ಒಪ್ಪಬಾರದು. ದೇಶದ ಇತಿಹಾಸವನ್ನು ಎಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇನ್ನೊಬ್ಬರನ್ನು ಮೆಚ್ಚಿಸಲು ಬರವಣಿಗೆಯಲ್ಲಿ ತೊಡಗಬಾರದು. ಹೃದಯ ಮತ್ತು ಮನಸ್ಸು ಏನು ಹೇಳುತ್ತದೆಯೋ ಅದನ್ನು ಮಾತ್ರ ಬರೆಯಬೇಕು. ನಮ್ಮ ಬರವಣಿಗೆ ಸತ್ಯ ನಿಷ್ಠವಾಗಿರಬೇಕು. ಸಮಾಜ ಎಂದ ಮೇಲೆ ನಮ್ಮನ್ನು ಪ್ರೀತಿಸುವ ಹಾಗೂ ದ್ವೇಷಿಸುವ ಜನರು ಇರುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಸಮಾಜದ ಹಿತಕ್ಕಾಗಿ, ಸತ್ಯಕ್ಕಾಗಿ ನಮ್ಮ ಲೇಖನಿ ಬಳಕೆಯಾಗಬೇಕು” ಎಂದು ಪ್ರತಿಪಾದಿಸಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಪರ ಕಾರ್ಯದರ್ಶಿ ಹೆಚ್.ಬಿ. ಮದನ್‌ಗೌಡರು ಮಾತನಾಡಿ, “ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್ ಹಾಗು ದೀಪಾ ಉಪ್ಪಾರ್ ಇವರು ಹತ್ತು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದುದು. ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ಸಾಕಷ್ಟಿದೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಹಾಸನದವರು. ಅದೇ ರೀತಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದ ಎಸ್.ಎಲ್. ಭೈರಪ್ಪರವರು ನಮ್ಮ ಜಿಲ್ಲೆಯವರೇ ಎನ್ನುವುದು ಖುಷಿಯ ವಿಚಾರ. ಎಲೆಮರೆ ಕಾಯಿಯಂತಿರುವ ಲೇಖಕರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಕೆಲಸವನ್ನು ಮಾಣಿಕ್ಯ ಪ್ರಕಾಶನ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಾಡುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕವಿಕಾವ್ಯ ಸಂಭ್ರಮದ ಸರ್ವಾಧ್ಯಕ್ಷೆ ವಾಣಿ ಶೆಟ್ಟಿಯವರು ಮಾತನಾಡಿ, “ಸಾಮರಸ್ಯದ ಬದುಕಿಗೆ ಪುಸ್ತಕ ಓದಬೇಕು. ಸಾಮಾಜಿಕ ಸಾಮರಸ್ಯದಿಂದ ಮನುಷ್ಯ ಉನ್ನತ ಮಟ್ಟಕ್ಕೆ ಏರುತ್ತಾನೆ. ಶಾಲಾ ದಿನಗಳಿಂದಲೇ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಂಡರೆ ಅಂತವರು ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾ ಗೌರವಾಧ್ಯಕ್ಷ ರವಿ ನಾಕಲಗೂಡು ಇವರು ಮಾತನಾಡಿ “ಮಾಣಿಕ್ಯ ಪ್ರಕಾಶನ ನಡೆಸುವ ಕಾರ್ಯಕ್ರಮಗಳು ಅಚ್ಚುಕಟ್ಟಾಗಿರುತ್ತವೆ. ಲೇಖಕರನ್ನು ಗುರುತಿಸಿ ಬೆಳೆಸುವ ಪರಿ ಮೆಚ್ಚುವಂತಹುದು. ಇಂತಹ ಕಾರ್ಯಕ್ರಮಗಳು ಹೆಚ್ಚಾಗಲಿ” ಎಂದು ಆಶಿಸಿದರು.


ಲೇಖಕರಾದ ಡಾ. ವಿಶ್ವೇಶ್ವರ ಎನ್. ಮೇಟಿ, ಸಾಹಿತಿ ಸತೀಶ್ ಜವರೇಗೌಡ, ಪತ್ರಕರ್ತ ನಾಗರಾಜ್ ಹೆತ್ತೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಇವರುಗಳು ಮಾತನಾಡಿದರು. ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಕಾಶಕಿ ದೀಪಾ ಉಪ್ಪಾರ್, ನಾಗರಾಜ್ ದೊಡ್ಡಮನಿ, ಬಸವರಾಜ್ ಇತರರು ಉಪಸ್ಥಿತರಿದ್ದರು.


ಹಾಸನದ ಜಿ. ಪ್ರಕಾಶ್, ಕೊಡಗು ಜಿಲ್ಲೆಯ ಡಾ. ರಘು ಕೋಟಿ, ಮೈಸೂರಿನ ಡಾ. ಹೆಚ್.ಎಲ್. ಶಿವಬಸಪ್ಪ, ಅರಸೀಕೆರೆಯ ಕೆ.ಎಸ್. ಮಂಜುನಾಥ್ ಹಾಗೂ ಹಾಸನದ ವೈ.ಎಸ್. ರಮೇಶ್ ಇವರಿಗೆ ‘ಹೊಯ್ಸಳ ಸಾಂಸ್ಕೃತಿಕ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ಆಲೂರು ಕಾರ್ಯದರ್ಶಿ ಧರ್ಮ ಕೆರಲೂರು ನಿರ್ವಹಿಸಿದರು.
