ಉಡುಪಿ : ಯಕ್ಷಗಾನ ಕಲಿಕೆ, ಪ್ರದರ್ಶನ, ಪ್ರಸಾರಕ್ಕೆ ಸಂಬಂಧಿಸಿದಂತೆ ವಿಶಿಷ್ಟ ರೀತಿಯಲ್ಲಿ ಕಲಾಸೇವೆಗೈಯುತ್ತಿರುವ ಕಲಾವಿದ ಕೆ. ಕೃಷ್ಣಮೂರ್ತಿ ತುಂಗರ ನಿರ್ದೇಶನದ ‘ಯಕ್ಷಕಲಾ ಅಕಾಡೆಮಿ (ರಿ.)’ ಬೆಂಗಳೂರು ಸಂಸ್ಥೆಯು ಯಕ್ಷಗಾನ ಕಲಾರಂಗ ಕೊಡಮಾಡುವ ಈ ಬಾರಿಯ ಪ್ರತಿಷ್ಠಿತ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ಗೆ ಆಯ್ಕೆಗೊಂಡಿದೆ.
ಪ್ರಶಸ್ತಿಯು ರೂಪಾಯಿ 1,00,000/- ನಗದು ಮತ್ತು ಪ್ರಶಸ್ತಿ ಪರಿಕರಗಳನ್ನೊಳಗೊಂಡಿದ್ದು, ಪ್ರಶಸ್ತಿ ಪ್ರದಾನವು ದಿನಾಂಕ 23 ನವೆಂಬರ್ 2025ರ ಭಾನುವಾರ ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಜರಗಲಿದೆ. ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.
