ಬೆಂಗಳೂರು : ಉದಯೋನ್ಮುಖ ನೃತ್ಯ ಕಲಾವಿದೆ ಕುಮಾರಿ ಆರತಿ ನಾಯರ್ 7ನೆಯ ವಯಸ್ಸಿಗೇ ರಂಗವನ್ನೇರಿ ತನ್ನ ಶಾಸ್ತ್ರೀಯ ನರ್ತನ ವೈಶಿಷ್ಟ್ಯವನ್ನು ಪ್ರಕಾಶಪಡಿಸಿದವಳು. ಅಸಾಧಾರಣ ವ್ಯಕ್ತಿತ್ವದ ಇವಳನ್ನು ‘ಬಹುಮುಖ ಪ್ರತಿಭೆ’ ಎಂದರೆ ಖಂಡಿತ ಕ್ಲೀಷೆಯಲ್ಲ. ಕೇರಳದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ನೆಲೆಸಿ ಭಾರತಾದ್ಯಂತವಲ್ಲದೆ ವಿಶ್ವಮಟ್ಟದಲ್ಲಿ ತನ್ನ ನೃತ್ಯ ಪ್ರದರ್ಶನಗಳನ್ನು ನೀಡುತ್ತ ಕಲಾರಸಿಕರ ಮೆಚ್ಚುಗೆ ಪಡೆದ ಆರತಿ, ವೇಣುಗೋಪಾಲ್ ನಾಯರ್ ಮತ್ತು ಪ್ರೀತಾ ಇವರ ಪುತ್ರಿ. ಎಳವೆಯಿಂದಲೇ ಶಾಸ್ತ್ರೀಯ ನೃತ್ಯ ಕಲಿತು, ಕಳೆದ 20 ವರ್ಷಕ್ಕೂ ಅಧಿಕ ವರ್ಷಗಳಿಂದ ನಾಟ್ಯಾಭ್ಯಾಸ ಮಾಡುತ್ತಿರುವ ಆರತಿ, ಇಂದು ಕುಚಿಪುಡಿಯಲ್ಲಿ ಡಿಪ್ಲೊಮಾ, ಮನಶಾಸ್ತ್ರ ವಿಷಯದಲ್ಲಿ ಪದವಿ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿಕೊಂಡ ಪ್ರತಿಭಾವಂತೆ.

ಅನೇಕ ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿರುವ ನಟಿಯೂ ಹೌದು. ಜೊತೆಗೆ ಮೋಹಿನಿಯಾಟ್ಟಂ, ಕಥಕ್, ನಟುವಾಂಗ, ಕಲರಿ ಪಯಟ್ಟು, ಏಕಪಾತ್ರಾಭಿನಯ ಮತ್ತು ಧ್ವನಿ ಏರಿಳಿತದ ಕಲೆಗಳಲ್ಲಿ ಅಭ್ಯಾಸ ಮಾಡಿರುವ ಆರತಿ ಇದಕ್ಕಾಗಿ ಅನೇಕ ಬಹುಮಾನಗಳನ್ನೂ ಗಳಿಸಿರುವುದು ಅವಳ ಅಗ್ಗಳಿಕೆ. ಖ್ಯಾತ ಕುಚಿಪುಡಿ ನೃತ್ಯಾಚಾರ್ಯ ದೀಪಾ ಶಶೀಂದ್ರನ್ (ಕುಚಿಪುಡಿ ಪರಂಪರ ಫೌಂಡೇಷನ್) ಇವರಿಂದ ದಶಕಗಟ್ಟಲೆ ಮಾರ್ಗದರ್ಶನ ಪಡೆದಿರುವ ಆರತಿ ದಿನಾಂಕ 09 ನವೆಂಬರ್ 2025ರ ಭಾನುವಾರದಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಸಂಜಯ್ ನಗರದ ಶ್ರೀ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ತನ್ನ ಏಕವ್ಯಕ್ತಿ ನೃತ್ಯ ಪ್ರದರ್ಶನ ‘ಕುಚಿಪುಡಿ ನಾಟ್ಯಕಲಾ ಲಲಿತಂ’ ಅರ್ಪಿಸಲಿದ್ದಾಳೆ. ಅವಳ ಕಲಾತ್ಮಕ ನರ್ತನವನ್ನು ಕಣ್ಮನ ತುಂಬಿಕೊಳ್ಳಲು ಸರ್ವರಿಗೂ ಆದರದ ಆಹ್ವಾನ.


ಆರತಿಗೆ ನೃತ್ಯ ಬಾಲ್ಯದ ಒಲವು. ಬಾಲಪ್ರತಿಭೆಯಾದ ಇವಳು, 7 ವರ್ಷಕ್ಕೆ ರಂಗವೇರಿ ‘ಸೈ’ ಎನಿಸಿಕೊಂಡವಳು. 9ನೆಯ ವಯಸ್ಸಿಗೇ ನೃತ್ಯ ಕಲಿಕೆ ಆರಂಭ. ಅಂದಿನ ಬಾಲಪ್ರತಿಭೆ ಇಂದು ಪರಿಪೂರ್ಣ ಕಲಾವಿದೆಯಾಗಿ ಬೆಳೆದಿದ್ದಾಳೆ. ಭರತನಾಟ್ಯ ಮತ್ತು ಕುಚಿಪುಡಿ ಎರಡೂ ನೃತ್ಯ ಶೈಲಿಗಳಲ್ಲಿ ಪರಿಣತಿ ಪಡೆಯಲು ಅವಳ ಮಾರ್ಗದರ್ಶಕರಾದ ಹಿರಿಯ ನೃತ್ಯ ಗುರುಗಳಾದ ಡಾ. ಶ್ಯಾಂ ಪ್ರಕಾಶ್ ಮತ್ತು ದೀಪಾ ನಾರಾಯಣ್ ಶಶೀಂದ್ರನ್ ಕಾರಣರು. ಅವಳು ಭಾಗವಹಿಸಿದ ಪ್ರಮುಖ ನೃತ್ಯೋತ್ಸವಗಳು- ಖಜುರಹೋ ನೃತ್ಯೋತ್ಸವ, ಬ್ರಹ್ಮ ಜ್ಞಾನ ಸಭಾ, ಮಾರ್ಗಶಿರ, ಪೆರೂರ್ ನಾಟ್ಯಾಂಜಲಿ ಮತ್ತು ಸೂರ್ಯ ಫೆಸ್ಟಿವಲ್ ಅಲ್ಲದೆ ಭಾರತದಾದ್ಯಂತ ಎಲ್ಲ ಮುಖ್ಯ ದೇವಾಲಯಗಳಲ್ಲಿ ದೈವೀಕ ನೃತ್ಯ ಪ್ರದರ್ಶನ ನೀಡಿರುವುದು ಆರತಿಯ ಹೆಮ್ಮೆ. ನಂದನಾರ್ ಚರಿತಂ, ಭವನುತ ಮತ್ತು ಕೆರೆಗೆ ಹಾರ ಮುಂತಾದ, ರಾಷ್ಟ್ರೀಯ ಮಟ್ಟದ ನೃತ್ಯರೂಪಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಭಾಗವಹಿಸಿದ್ದಾಳೆ. ಆರತಿ, ದೂರದರ್ಶನದಲ್ಲಿ ಮಾನ್ಯತೆ ಪಡೆದ ಕಲಾವಿದೆಯೂ ಆಗಿದ್ದು, ಕೇರಳ ಕಲೋತ್ಸವದಲ್ಲಿ ತೀರ್ಪುಗಾರಳಾಗಿ ಸೇವೆ ಸಲ್ಲಿಸಿರುವುದು ವಿಶೇಷ.

ಆರತಿ ಕೇವಲ ನೃತ್ಯಗಾರ್ತಿಯಾಗಿ ಹೆಸರು ಪಡೆದಿರುವುದಲ್ಲದೆ ಉತ್ತಮ ನಟಿಯಾಗಿಯೂ ತನ್ನ ಪ್ರತಿಭೆಯನ್ನು ತೋರಿದ್ದಾಳೆ. ವಿವಿಧ ಭಾಷೆಯ ಚಲನಚಿತ್ರಗಳಾದ ಸಖವಿಂತೆ ಪ್ರಿಯ ಸಖಿ, ಸಾಗುತ ದೂರ ದೂರ, ಪುಲ್ಲು, ನಿಜನುಂ ಪಿನ್ನೋರು ನಿಜನಂ, ರಾಂಚಿ ಮತ್ತು ಬ್ರೈಡ್ ಆಫ್ ಡ್ಯಾನ್ಸ್ ಮುಂತಾದವುಗಳಲ್ಲಿ ಅಭಿನಯಿಸಿದ್ದಾಳೆ. ಕೊಡೈಕೆನಾಲ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅವಳಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿರುವುದು ಅವಳ ಅಗ್ಗಳಿಕೆಯ ಸಂಗತಿ. ಆರತಿ ಸಹಯೋಗದಲ್ಲಿ ‘ಸಂಕಲ್ಪ ನಿತ್ಯ ನಿರಂತರ’ ನೃತ್ಯಶಾಲೆಯನ್ನು ಆರಂಭಿಸಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾಳೆ. ಜೊತೆಗೆ ತನ್ನದೇ ಆದ ‘ಕೇಶವ ನೃತ್ಯಾಂಕುರ’ – ನಾಟ್ಯಶಾಲೆಯ ಅನೇಕ ಶಾಖೆಗಳ ಮೂಲಕ ಶಾಸ್ತ್ರೀಯ ನೃತ್ಯದ ಅಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವಳು. ಇಂಥ ಬಹುಮುಖ ಪ್ರತಿಭೆಯಾದ ಕುಮಾರಿ ಆರತಿ ನಾಯರ್ ಅವರ ಭವಿಷ್ಯದ ಸಾಧನೆಗಳಿಗೆ ಸರ್ವ ಶುಭಾಶಯಗಳು.


ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
