ಉಡುಪಿ : ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ಇದರ ವತಿಯಿಂದ ಪರ್ಯಾಯ ಪುತ್ತಿಗೆ ಮಠದ ಸಹಯೋಗದೊಂದಿಗೆ ಆಯೋಜಿಸಿದ್ದ ಹದಿನೆಂಟನೇ ವರ್ಷದ ‘ಚಿಟ್ಟಾಣಿ ಯಕ್ಷಗಾನ ಸಪ್ತಾಹ’ವು ದಿನಾಂಕ 05 ನವೆಂಬರ್ 2025ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.
ಈ ಸಪ್ತಾಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು “ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನ ಕ್ಷೇತ್ರದ ಅಪೂರ್ವ ಪ್ರತಿಭೆ. ಎಲ್ಲ ಪಾತ್ರಗಳನ್ನೂ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದ ಅವರು, ಯಕ್ಷಗಾನ ಕಲೆಯ ಕೀರ್ತಿಯನ್ನೂ ಹೆಚ್ಚಿಸಿದವರು. ಚಿಟ್ಟಾಣಿ ಸಂಸ್ಮರಣೆಯಲ್ಲಿ ನಡೆಯುತ್ತಿರುವ ಈ ಸಪ್ತಾಹ ಕಾರ್ಯಕ್ರಮ ಯಕ್ಷಗಾನದ ಕಿರಿಯ ಕಲಾವಿದರಿಗೆ ಪ್ರೇರಣೆಯಾಗಲಿ” ಎಂದು ನುಡಿದರು.
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ, ಧರ್ಮಸ್ಥಳ ಶಾಂತಿವನ ಟ್ರಸ್ಟಿನ ಅಧ್ಯಕ್ಷ ಸೀತಾರಾಮ ತೋಳ್ಪಡಿತ್ತಾಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಲಾವಿದ ಕಾರ್ತಿಕ ಚಿಟ್ಟಾಣಿ, ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್ ಉಪಸ್ಥಿತರಿದ್ದರು.
ಎಂ. ಗೋಪಿಕೃಷ್ಣ ರಾವ್ ಶ್ರೀಗಳಿಗೆ ಫಲ ಸಮರ್ಪಿಸಿ, ಮುರಲಿ ಕಡೆಕಾರ್ ಕಾರ್ಯಕ್ರಮ ಸಂಯೋಜಿಸಿ, ನಾರಾಯಣ ಎಂ. ಹೆಗಡೆ ನಿರೂಪಿಸಿದರು. ಸಪ್ತಾಹದ ಮೊದಲ ಪ್ರದರ್ಶನವಾಗಿ ಕವಿ ಗಣೇಶ್ ಕೊಲೆಕಾಡಿಯವರ ‘ಸಮರ ಸೌಗಂಧಿಕಾ’ ಯಕ್ಷಗಾನ ಪ್ರದರ್ಶನಗೊಂಡಿತು.
