ವಡ್ಡರ್ಸೆ : ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಇದರ ವತಿಯಿಂದ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ನಾರಾಯಣಗುರು ರೆಸಿಡೆನ್ಸಿಯಲ್ ಸ್ಕೂಲ್ ವಡ್ಡರ್ಸೆಯಲ್ಲಿ ದಿನಾಂಕ 07 ನವೆಂಬರ್ 2025ರ ಸಂಜೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ದೀವಟಿಕೆಗೆ ತೈಲ ಹಾಕುವುದರ ಮೂಲಕ ದೀಪವನ್ನು ಪ್ರಜ್ವಲಿಸಿದ ನಾರಾಯಣಗುರು ರೆಸಿಡೆನ್ಸಿಯಲ್ ಸ್ಕೂಲ್ ವಡ್ಡರ್ಸೆಯ ಪ್ರಾಂಶುಪಾಲರಾದ ಸವಿತಾ ಕೋಲಿ ಮಾತನಾಡಿ “ಬಹಳ ಶಾಸ್ತ್ರೀಯವೆನ್ನಿಸುವ ಯಕ್ಷಗಾನವನ್ನು ಮಕ್ಕಳ ಮೂಲಕ ಮಕ್ಕಳ ಮುಂದೆ ಪ್ರಸ್ತುತ ಪಡಿಸುವ ಯಶಸ್ವೀ ಕಲಾವೃಂದದ ಉದ್ದೇಶ ಯಕ್ಷಗಾನದ ಮೂಲ ಪರಂಪರೆಯನ್ನು ರಂಗದಲ್ಲಿ ಪ್ರಸ್ತುತ ಪಡಿಸಿ ಪರಿಚಯಿಸುವುದಾಗಿದೆ. ರಾಜ್ಯದಾದ್ಯಂತ ಆಗಮಿಸಿದ ಮಕ್ಕಳ ಮುಂದೆ ಪ್ರದರ್ಶಿಸುವ ಯಕ್ಷಗಾನ ಕಲೆ ಅಮೂಲ್ಯವಾದದ್ದಾಗಿದೆ. ದೀಪ ಹಿಡಿದು ರಂಗ ಪ್ರವೇಶ ಮಾಡಿ ದೀಪವನ್ನು ರಂಗದಲ್ಲಿ ಪ್ರತಿಷ್ಠಾಪಿಸಿ ಬೆಳಕನ್ನು ಚೆಲ್ಲುವ ಕೆಲಸ ಶ್ಲಾಘನೀಯ. ದೂರದ ಊರಿಂದ ಬಂದು ಪಾಠದಲ್ಲಿಯೇ ಕಳೆವ ಮಕ್ಕಳಿಗೆ ಮನೋರಂಜನೆ ತಂದಿದೆ. ಹಲವಾರು ಶಾಲೆಗಳಲ್ಲಿ ಯಕ್ಷಗಾನದ ಮೂಲ ಸತ್ವವನ್ನು ಕಾಣಿಸುವ ಇವರ ಕಾರ್ಯ ಪ್ರಶಂಸನೀಯ” ಎಂದು ಹೇಳಿದರು.

ಡ್ಯುಯಲ್ ಸ್ಟಾರ್ ಎಜ್ಯುಕೇಷನ್ ಇನ್ಸ್ಟಿಟ್ಯೂಟ್ ಸೆಕ್ರೆಟರಿ ಪ್ರಕಾಶ್ ಆಚಾರ್ಯ ಮಾತನ್ನಾಡಿ “ಸಂಪ್ರದಾಯಬದ್ಧ ಯಕ್ಷಗಾನಕ್ಕೆ ಅಳಿವಿಲ್ಲ. ಯಕ್ಷಗಾನದಿಂದ ಭಾಷಾ ಶುದ್ಧಿ, ಧೈರ್ಯ, ಸಂಸ್ಕಾರ ದೊರೆಯುತ್ತದೆ. ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸುವ ಕಲೆ ಈ ಕಲೆಯಿಂದ ಒಲಿಯುತ್ತದೆ” ಎಂದರು. ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಇದರ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಮಾತನಾಡಿ “ಯಕ್ಷಗಾನಕ್ಕೆ ಶಾಸ್ತ್ರೀಯ ಮನ್ನಣೆ ದೊರೆಯಬೇಕು. ತಾಳ, ಲಯ, ರಾಗ, ವೇಷ, ಅಭಿನಯ ಸರ್ವ ಜ್ಞಾನವೂ ಈ ಕಲೆಯಲ್ಲಿ ಅಡಕವಾಗಿದೆ. ಈ ಕಲೆ ಹರಿವ ತೊರೆ. ಎಷ್ಟೇ ಹೊಸ ಹೊಸ ಪ್ರಯೋಗಗಳು ರಂಗದಲ್ಲಿ ಕಂಡರೂ ಮೂಲ ಪರಂಪರೆ ಗಟ್ಟಿಯಾಗಿ ನಿಂತಿದೆ” ಎಂದರು. ಮಹಾಲಿಂಗೇಶ್ವರ ಕಲಾರಂಗದ ಸದಸ್ಯ ಸಚಿನ್ ಶೆಟ್ಟಿ, ಸುಬ್ರಹ್ಮಣ್ಯ ವೈದ್ಯ, ಯೋಗೀಶ್ ಭಟ್ ಉಪಸ್ಥಿತರಿದ್ದರು. ಪ್ರವೀಣ್ ನಿರೂಪಣೆಗೈದರು. ಬಳಿಕ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಚಿಣ್ಣರಿಂದ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ರಂಗಪ್ರಸ್ತುತಿಗೊಂಡಿತು.
