ಮಂಗಳೂರು : ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಅಧ್ಯಾಪಕ, ಸಿಬಂದಿಗಳ ಒಕ್ಕೂಟ ಗಿಳಿವಿಂಡು (ರಿ ) ಇದರ ವತಿಯಿಂದ ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ದಿನಾಂಕ 09 ನವೆಂಬರ್ 2025ರಂದು ಆಯೋಜಿಸಿದ್ದ ಗಿಳಿವಿಂಡು ನಾಲ್ಕನೇ ಮಹಾ ಸಮಾವೇಶ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಪ ಪ್ರಶಸ್ತಿ ಪುರಸ್ಕೃತರು ಮತ್ತು ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ “ಕನ್ನಡ ನಮ್ಮ ಭಾವ ವಿನಿಮಯದ ಭಾಷೆಯಾಗಿದೆ. ನಮ್ಮ ಸಹಜ ಜ್ಞಾನ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಕೃತಕ ಜ್ಞಾನ ತಂತ್ರ ಜ್ಞಾನಗಳನ್ನು ಬಳಸಿಕೊಳ್ಳಬೇಕಾಗಿದೆ. ನಾವು ಸಂಘಟಿತರಾಗಿ ಕಾರ್ಯನಿರ್ವಹಿಸಿದಾಗ ಕನ್ನಡ ಇನ್ನಷ್ಟು ಬಲಿಷ್ಠವಾಗಲು ಸಾಧ್ಯ. 1968ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಇವರ ನಿರ್ದೇಶಕತ್ವದಲ್ಲಿ ಪ್ರಾರಂಭಗೊಂಡ ಕನ್ನಡ ವಿಭಾಗ ಇಂದು ವಿಶಾಲವಾಗಿ ಬೆಳೆದಿದ್ದು ಕನ್ನಡವನ್ನು ಕಟ್ಟುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ನಿಸ್ವಾರ್ಥ ಸೇವೆಯ ಮನೋಭಾವದಿಂದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಪ್ರಸಾರ ಮಾಡಿದ ಕನ್ನಡ ಅನುದಾನಿತ ಶಾಲೆಗಳು ಸರಕಾರದ ನೀತಿಗಳಿಂದ ಮುಚ್ಚಿ ಹೋಗುವ ಹಂತ ತಲುಪಿದೆ. ಸರಕಾರಿ ಹಾಗೂ ಖಾಸಗಿ ಕನ್ನಡ ಶಾಲೆಗಳನ್ನು ಬಲಿಷ್ಠಗೊಳಿಸುವ ಕಾರ್ಯ ಸಮಾಜ ಹಾಗೂ ಸರಕಾರದಿಂದ ನಡೆಯಬೇಕಾಗಿದೆ. ಪದವಿ ಶಿಕ್ಷಣದಲ್ಲಿ ಖಾಸಗಿ ವಿ.ವಿ.ಗಳು ಒಳಗೊಂಡಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಕನ್ನಡದ ಕಲಿಕೆಗೆ ಆದ್ಯತೆ ನೀಡಬೇಕು” ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ. ಮಾತನಾಡಿ “ಅಂತರ್ ಶಿಸ್ತಿನ ಅಧ್ಯಯನ ಕ್ರಮವನ್ನು ಅಳವಡಿಸಿಕೊಂಡು ವಿಶೇಷ ಮಾನ್ಯತೆ ಪಡೆದಿರುವ ಕನ್ನಡ ವಿಭಾಗಕ್ಕೆ ವಿಶಿಷ್ಟ ಅನನ್ಯತೆ ಇದೆ. ಬಹು ಸಾಧ್ಯತೆಗಳನ್ನು ಒಳಗೊಂಡಿರುವ ಕನ್ನಡ ವಿಭಾಗ ಬಹುತ್ವದ, ಸಾಮಾಜಿಕ ಸಾಮರಸ್ಯದ, ಬಂಧುತ್ವದ ಪರಿಕಲ್ಪನೆಗಳನ್ನು ಅನುಷ್ಠಾನಗೊಳಿಸಿ ಅರಿವನ್ನು ವಿಸ್ತರಣೆಗೊಳಿಸುವ ಕಾರ್ಯ ಮಾಡಿದೆ” ಎಂದರು.

ಈ ಸಂದರ್ಭದಲ್ಲಿ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ಪ್ರೊ. ಬಿ.ಎ. ವಿವೇಕ ರೈ, ಪ್ರೊ. ಕೆ. ಚಿನ್ನಪ್ಪ ಗೌಡ, ಪ್ರೊ. ಅಭಯ ಕುಮಾರ್, ಪ್ರೊ. ಬಿ. ಶಿವರಾಮ ಶೆಟ್ಟಿ ಮತ್ತು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಪ್ರೊ. ನಾಗಪ್ಪ ಗೌಡ ಆರ್., ಪ್ರೊ. ಸೋಮಣ್ಣ ಹೊಂಗಳ್ಳಿ, ಡಾ. ಧನಂಜಯ ಕುಂಬ್ಳೆ ಇವರನ್ನು ಸಂಮಾನಿಸಲಾಯಿತು. ಗಿಳಿವಿಂಡಿನ ಅಧ್ಯಕ್ಷ ಪ್ರೊ. ಶಿವರಾಮ ಶೆಟ್ಟಿ ಸ್ವಾಗತಿಸಿ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಮತ್ತು ಗಿಳಿವಿಂಡಿನ ಕಾರ್ಯದರ್ಶಿ ಪ್ರೊ. ನಾಗಪ್ಪ ಗೌಡ ಆರ್. ವಂದಿಸಿ, ಪ್ರಾಧ್ಯಾಪಕ ಡಾ. ಯಶು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಗಿಳಿವಿಂಡು ಕಲರವದಲ್ಲಿ ‘ಕನ್ನಡ ಚಿಂತನೆ’ ಕುರಿತು ಮಾತನಾಡಿದ ಲೇಖಕಿ ಡಾ. ಸಬಿತಾ ಬನ್ನಾಡಿ “ಸಿದ್ದ ಮಾದರಿಯ ಚೌಕಟ್ಟುಗಳನ್ನು ದಾಟಿ ಕನ್ನಡ ವಿದ್ಯಾರ್ಥಿಗಳು ಬೆಳೆದು ಹೊಸ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳಬೇಕಾಗಿದೆ. ಖಾಸಗಿ ವಿಶ್ವ ವಿದ್ಯಾನಿಲಯಗಳು ಕನ್ನಡ ಕಲಿಕೆಗೆ ಸರಿಯಾದ ರೀತಿಯಲ್ಲಿ ಅವಕಾಶ ಕಲ್ಪಿಸಿ ಕೊಡಬೇಕಾಗಿದ್ದು, ಅಂತಹ ವಾತಾವರಣವನ್ನು ನಾವು ಸೃಷ್ಠಿಸಬೇಕು” ಎಂದರು. ಡಾ. ಜ್ಯೋತಿ ಚೇಲೈರು ಕಾರ್ಯಕ್ರಮ ನಿರೂಪಿಸಿದರು. ಗಿಳಿವಿಂಡು ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ತಾಳ್ತಜೆ ವಸಂತ ಕುಮಾರ್ ಸಮಾರೋಪ ಭಾಷಣದಲ್ಲಿ “ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಗೆ ತನ್ನದೇ ಆದ ಅಸ್ಮಿತೆ ಇದ್ದು ಆಧುನಿಕ ಅವಶ್ಯಕತೆಗಳಿಗೆ ಸ್ಪಂದಿಸುತ್ತ ಸಾಹಿತ್ಯ ಪರಂಪರೆಯ ಮೂಲ ಧಾರೆಗಳನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆ” ಎಂದರು. ವಿಮರ್ಶಕ ಶಿವಾಜಿ ಜೋಯಿಸ್ ಅಧ್ಯಕ್ಷತೆ ವಹಿಸಿದ್ದರು. ಸುಧಾ ರಾಣಿ ಕಾರ್ಯಕ್ರಮ ನಿರೂಪಿಸಿ, ಡಾ. ಧನಂಜಯ ಕುಂಬ್ಳೆ ವಂದಿಸಿದರು. ಗಿಳಿವಿಂಡಿನ ಉಪಾಧ್ಯಕ್ಷೆ ಚಂದ್ರಕಲಾ ನಂದಾವರ, ಜೊತೆ ಕಾರ್ಯದರ್ಶಿಗಳಾದ ಡಾ. ಆರ್. ನರಸಿಂಹ ಮೂರ್ತಿ, ಡಾ. ವಾಸುದೇವ ಬೆಳ್ಳೆ, ಸಮಿತಿ ಸದಸ್ಯರಾದ ವಾಸುದೇವ ಉಚ್ಚಿಲ, ಡಾ. ಇಸ್ಮಾಯಿಲ್, ಕೃಷ್ಣಮೂರ್ತಿ, ಡಾ. ವಿಶ್ವನಾಥ್ ಬದಿಕಾನ, ಪದ್ಮನಾಭ, ನಿವೃತ್ತ ಕುಲ ಸಚಿವ ಕೆ. ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.
