ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಸಹಭಾಗಿತ್ವದಲ್ಲಿ ತುಳು ಭವನದಲ್ಲಿ ದಿನಾಂಕ 08 ನವೆಂಬರ್ 2025ರಂದು ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಮಾತುಕತೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಾನಪದ ವಿದ್ವಾಂಸ, ಡಾ. ಶಿವರಾಮ ಕಾರಂತ ಟ್ರಸ್ಟಿನ ನಿರ್ದೇಶಕ ಡಾ. ಗಣನಾಥ ಶೆಟ್ಟಿ ಎಕ್ಕಾರು “ಜಾನಪದ ಕಲಾವಿದರು ಯಾವುದೇ ಪ್ರತಿಫಲ ಬಯಸದೆ ಸೇವಾ ನಿರತರಾಗಿರುತ್ತಾರೆ. ತುಳುನಾಡಿನ ಇಬ್ಬರು ಹಿರಿಯ ಕಲಾವಿದರಾದ ಸಿಂಧೂ ಗುಜರನ್, ಉಮೇಶ್ ಪಂಬದ ಗಂಧಕಾಡು ಇವರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮೂಲಕ ಗುರುತಿಸಿದ ರಾಜ್ಯ ಸರ್ಕಾರದ ನಡೆ ಶ್ಲಾಘನೀಯ. ದೈವಾರಧನೆಯೂ ತುಳು ನಾಡಿನ ಆರಾಧನಾ ಶಕ್ತಿಯ ಮೂಲ ಸೆಲೆಯಾಗಿದ್ದು, ಉಮೇಶ್ ಪಂಬದ ಅವರಂತ ನೂರಾರು ದೈವಾರಾಧಕರು ಶತಮಾನಗಳಿಂದ ಪರಂಪರೆ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇವತ್ತು ತುಳುನಾಡಿನ ಭೂತಾರಾಧನೆ ಪಡೆದಿರುವ ಜನಪ್ರಿಯತೆ ಹಿಂದೆ ಶತಮಾನಗಳ ಶ್ರದ್ಧೆ, ಬದ್ಧತೆಯ ಫಲ ಇದೆ.” ಎಂದು ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿಂಧೂ ಗುಜರನ್ ಮತ್ತು ಉಮೇಶ್ ಪಂಬದ ಇವರ ಜೊತೆ ಮುಲ್ಕಿ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಸಂವಾದ ನಡೆಸಿಕೊಟ್ಟರು. ಉಮೇಶ್ ಪಂಬದ ಮಾತನಾಡಿ, ನಿಷ್ಠೆ, ಶ್ರದ್ದೆಯಿಂದ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಸರಕಾರ ಗುರುತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಸಿಂಧೂ ಗುಜರನ್ ಇವರು ತೆಂಬರೆ ನುಡಿಸಿ ಪಾಡ್ಡನ ಪ್ರಸ್ತುತಪಡಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಸ್ತಾವನೆಗೈದರು. ಮಂಗಳೂರು ತಾಲೂಕು ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ ಶುಭಕೋರಿದರು. ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಸ್ವಾಗತಿಸಿ, ವಂದಿಸಿದರು.
