ಮಂಗಳೂರು : ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಯಕ್ಷಗಾನ ಕಲಾಪೋಷಕರಿಗಾಗಿ ನೀಡುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ಕ್ಕೆ ಈ ಬಾರಿ ಹಿರಿಯ ಸ್ವರ್ಣೋದ್ಯಮಿ ಎಂ. ರವೀಂದ್ರ ಶೇಟ್ ಆಯ್ಕೆಯಾಗಿದ್ದಾರೆ. ಯಕ್ಷಗಾನ ಆಟ ಕೂಟಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಹಿರಿಯ ಕಲಾವಿದರಿಗೆ ನೀಡುವ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಯನ್ನು ಹಿರಿ ತಲೆಮಾರಿನ ವೇಷಧಾರಿ ಬೋಳಾರ ಸುಬ್ಬಯ್ಯ ಶೆಟ್ಟಿ ಇವರಿಗೆ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ದಿನಾಂಕ 23 ನವೆಂಬರ್ 2025ರಂದು ಮಂಗಳೂರು ವಿ.ವಿ.ಯ ರವೀಂದ್ರ ಕಲಾ ಭವನದಲ್ಲಿ ಜರಗುವ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಮತ್ತು ದಿನಾಂಕ 29 ನವೆಂಬರ್ 2025ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಯನ್ನು ಪ್ರದಾನಿಸಲಾಗುವುದು.
ಎಂ. ರವೀಂದ್ರ ಶೇಟ್ : ಚಿನ್ನಾಭರಣಗಳ ವ್ಯಾಪಾರದಲ್ಲಿ ದಂತಕಥೆಯಾಗಿರುವ ದಿ. ಸುಬ್ರಾಯ ಲಕ್ಷ್ಮಣ ಶೇಟ್ (ಎಸ್.ಎಲ್. ಶೇಟ್ ) 1947ರಲ್ಲಿ ಸ್ಥಾಪಿಸಿದ ‘ಎಸ್.ಎಲ್. ಶೇಟ್ ಡೈಮಂಡ್ ಹೌಸ್’ ಸಂಸ್ಥೆಯನ್ನು ಪ್ರಸ್ತುತ ಮುನ್ನಡೆಸುತ್ತಿರುವ ಅವರ ಪುತ್ರ ಎಂ. ರವೀಂದ್ರ ಶೇಟ್ ಉದ್ಯಮದೊಂದಿಗೆ ಕಲಾ ಪೋಷಕರಾಗಿ ಯಕ್ಷಗಾನ, ಧಾರ್ಮಿಕ ಮತ್ತು ಸಾಂಸ್ಕೃ ತಿಕ ಚಟುವಟಿಕೆಗಳಿಗೆ ಉದಾರ ಪ್ರೋತ್ಸಾಹ ನೀಡುತ್ತಿದ್ದಾರೆ.
ಬೋಳಾರ ಸುಬ್ಬಯ್ಯ ಶೆಟ್ಟಿ : ಯಕ್ಷಗಾನ ಆಟ – ಕೂಟಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟರಿಗೆ ಈಗ 85ರ ಹರೆಯ, ಬೋಳಾರ ತಿಮ್ಮಯ್ಯ ಸುವರ್ಣರಿಂದ ಯಕ್ಷಗಾನ ನಾಟ್ಯ ಹಾಗೂ ಬೋಳಾರ ನಾರಾಯಣ ಶೆಟ್ಟರಲ್ಲಿ ಅರ್ಥಗಾರಿಕೆಯನ್ನು ಅಭ್ಯಸಿಸಿದರು. ಆರೂವರೆ ದಶಕಗಳ ಕಲಾಸೇವೆ ಮಾಡಿದ್ದಾರೆ.
