ಬೆಂಗಳೂರು : ಶತಮಾನೋತ್ಸವ ಆಚರಿಸುತ್ತಿರುವ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರಮಂಡಳಿ ಹುಕ್ಲಮಕ್ಕಿ ಮೇಳದ ಅಪರೂಪದ ‘ಶಬರಾರ್ಜುನ’ ಯಕ್ಷಗಾನ ಪ್ರದರ್ಶನವು ದಿನಾಂಕ 08 ನವೆಂಬರ್ 2025ರಂದು ಬೆಂಗಳೂರಿನ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಡಾಕ್ಟರ್ ಬಿ.ಡಿ. ಪಟೇಲ್, ಜಿ. ಮೃತ್ಯುಂಜಯ, ಶ್ರೀಮತಿ ಮಾಲತಿ ಹೆಗಡೆ ಇವರೊಂದಿಗೆ ಉದ್ಘಾಟಿಸಿದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಹುಕ್ಲಮಕ್ಕಿ ಮೇಳದ ಮ್ಯಾನೇಜರ್, ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್ ಗೋಪಾಲಕೃಷ್ಣ ಹೆಗಡೆ ಇವರು ಮಾತನಾಡಿ “ಬಾಲಕರ, ಮಹಿಳೆಯರ ಸಹಿತ ಪ್ರದರ್ಶನಗೊಳ್ಳುವ ಎಲ್ಲ ಯಕ್ಷಗಾನ ತಾಳಮದ್ದಳೆಗಳಲ್ಲಿ ಕನ್ನಡವನ್ನು ಮಾತ್ರ ಬಳಸುತ್ತಿದ್ದು, ಈ ಕ್ಷೇತ್ರ, ಕನ್ನಡ ನಾಡು, ನುಡಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿವೆ. ಸಂಪರ್ಕ, ಸಕಲ ಸೌಲಭ್ಯಗಳಿಂದ ದೂರದ ಬೆಟ್ಟ-ಗುಡ್ಡಗಳ ನಡುವೆ ಇರುವ ಹಳ್ಳಿಯೊಂದರಲ್ಲಿ ಸ್ಥಾಪಿತವಾಗಿ, ಕಷ್ಟ ನಷ್ಟ ಎದುರಿಸಿಯೂ ಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಕುವೆಂಪು ಅವರಿಂದ 1924ರಲ್ಲಿ ಭಾರತ ಜನನಿಯ ತನುಜಾತೆ ನಾಡಗೀತೆ ರಚಿತವಾದರೆ, ಮಾರನೆಯ ವರ್ಷ 1925ರಲ್ಲಿ ನಮ್ಮ ಹುಕ್ಲಮಕ್ಕಿ ಮೇಳ ಸ್ಥಾಪನೆಯಾಗಿರುವುದು ವಿಶೇಷ; ಈ ಮೇಳ ಈ ವರ್ಷ ಶತಮಾನೋತ್ಸವ ಆಚರಿಸುತ್ತಿದ್ದು, ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ ಇಂದಿನ ಈ ಪ್ರದರ್ಶನ ಕನ್ನಡ ರಾಜ್ಯೋತ್ಸವದ ಈ ತಿಂಗಳಿನಲ್ಲಿ ಬಹಳ ಪ್ರಸ್ತುತ. ಈ ಮೇಳದ ನಿರಂತರ ಚಟುವಟಿಕೆಗಳಿಂದ ಯಕ್ಷಗಾನ ಲೋಕಕ್ಕೆ ಹಲವಾರು ಪ್ರತಿಭೆಗಳ ಪರಿಚಯವಾಗಿದೆಯಲ್ಲದೆ, ಈ ಮೇಳದ ಪ್ರಭಾವದಿಂದ ಶಿಕ್ಷಕರಾಗಿದ್ದ ಕಡತೋಕ ಮಂಜುನಾಥ ಭಾಗವತರು ತೆಂಕುತಿಟ್ಟು, ಬಡಗುತಿಟ್ಟು ಎರಡೂ ಪ್ರಕಾರಗಳ ಖ್ಯಾತ ಭಾಗವತರಾಗಿ ಹೊರಹೊಮ್ಮಿದ್ದು ಹೆಮ್ಮೆಯ ವಿಷಯ” ಎಂದು ಸಂತಸಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ, ಪ್ರಸಂಗಕರ್ತ, ಸಂಘದ ಸದಸ್ಯರಾದ ದಿನೇಶ ಉಪ್ಪೂರ ಇವರು ಹಿಮ್ಮೇಳ ಹಾಗೂ ಮುಮ್ಮೇಳದ ಕಲಾವಿದರನ್ನು ಪರಿಚಯಿಸಿದರು. ವಿರಳವಾಗಿ ಪ್ರದರ್ಶಿತವಾಗುತ್ತಿರುವ ಈ ಪೌರಾಣಿಕ ಯಕ್ಷಗಾನ ಪ್ರಸಂಗ ಶಬರಾರ್ಜುನ, ಹುಕ್ಲಮಕ್ಕಿ ಮೇಳದ ಸಂಚಾಲಕ ಡಾಕ್ಟರ್ ಶ್ರೀಪಾದ ಹೆಗಡೆ ಅವರ ನೇತೃತ್ವದಲ್ಲಿ ಪ್ರದರ್ಶಿತವಾಯಿತು. ಮುಖ್ಯ ಪಾತ್ರಧಾರಿಯಾದ ಹೆಗಡೆಯವರು ಶಬರನ ಪಾತ್ರದಲ್ಲಿ, ಶಬರ ಪಡೆಗಳೊಂದಿಗೆ ಅರ್ಭಟದ ರಂಗ ಪ್ರವೇಶ ಮಾಡಿದ್ದು ಸಭಿಕರನ್ನು ರೋಮಾಂಚನಗಳಿಸಿತು. ಕಿರುನಗೆಯಲಿ ಶಂಕರನು….. , ಎನಲು ನಗುತ ಅಭವನವನ…. ಪದ್ಯಗಳಿಗೆ ಅವರ ನೃತ್ಯ, ಹಾವ-ಭಾವ ಪ್ರದರ್ಶನ ನೋಡಿ ಜನ ಮೆಚ್ಚುಗೆ ವ್ಯಕ್ತಪಡಿಸಿದರು.

ಅರ್ಜುನನ ಪಾತ್ರದಲ್ಲಿ ಇಂಜಿನಿಯರ್ ರವಿ ಮಡೋಡಿ ತಮ್ಮ ಪ್ರಭುದ್ಧ ಅಭಿನಯದಿಂದ ನವರಸಗಳ ಅಭಿನಯದ ಅಪರೂಪದ ಪ್ರದರ್ಶನ ನೀಡಿದರು. ಮರುಳು ವ್ಯಾಧ ಮರೆಯಲಿದ್ದು….. ಪದ್ಯಕ್ಕಂತೂ ಅವರ ಅಭಿನಯ ಜನರನ್ನು ಮಂತ್ರಮುಗ್ಧರನ್ನಾಗಿಸಿ, ಯಕ್ಷಗಾನದ ಶಕ್ತಿ ಎಂತಹುದು ಎಂಬುದು ಗೋಚರಿಸುವಂತಾಯಿತು. ಈ ಇಬ್ಬರು ದ್ವಂದ್ವ ಪಾತ್ರಗಳನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿದ ಶ್ರೇಯಸ್ಸು ಭಾಗವತ ಪ್ರಸನ್ನ ಮಾಗೋಡ ಅವರಿಗೂ ಸಲ್ಲಬೇಕು; ಮಧುರವಾದ ಕಂಠದಿಂದ ಆದ್ಯತೆಯ ಸ್ವರಗಳ ಏರಿಳಿತ, ಕಲಾವಿದರು ಕಲೆ ಪ್ರದರ್ಶಿಸುವಾಗ ಹಿನ್ನೆಲೆಯಿಂದ ಸೂಕ್ತವಾದ ಆಲಾಪಗಳ ಏರಿಳಿತದಿಂದ ಕಲಾಪ್ರದರ್ಶನದಲ್ಲಿ, ಹೇಗೆ ಸೂಕ್ತವಾದ ಹಿನ್ನೆಲೆಯೂ ಪರಿಣಾಮಕಾರಿಯಾಗಬಹುದೆಂಬುದನ್ನು ತೋರಿಸಿಕೊಟ್ಟರಲ್ಲದೆ, ಕಲಾವಿದರಿಗೆ ವಿವಿಧ ರೀತಿಯಿಂದ ಕಲೆಯನ್ನು ಪ್ರದರ್ಶಿಸಲು ಅನುಕೂಲವಾಗುವಂತೆ ಪುನಃ ಪುನಃ ಪದ್ಯಗಳನ್ನು ಸೂಕ್ಷ್ಮವಾಗಿ, ಸೂಕ್ತವಾಗಿ ಹಾಡಿ ಉತ್ತೇಜಿಸಿ, ತಾವೂ ಒಬ್ಬ ಕರ್ನಾಟಕದ ಪ್ರಸಿದ್ಧ ಭಾಗವತರಾಗುವ ಎಲ್ಲ ಲಕ್ಷಣಗಳನ್ನೂ ತೋರಿಸಿ ಜನರಿಂದ ಹಲವು ಬಾರಿ ಚಪ್ಪಾಳೆಗಿಟ್ಟಿಸಿದರು.

ಹಿಮ್ಮೇಳದಲ್ಲಿ ಸಹಕರಿಸಿದ ಇನ್ನೋರ್ವ ಭಾಗವತ ನಂದನ ಹೆಗಡೆ, ಮದ್ದಲೆಯಲ್ಲಿ ನಾರಾಯಣ ಹೆಬ್ಬಾರ, ಚಂಡೆಯಲ್ಲಿ ಪನ್ನಗ ಮಯ್ಯ ಅವರು ಉತ್ತಮ ಸಾಥ್ ನೀಡಿದರು. ಮುಮ್ಮೇಳದಲ್ಲಿ ಶ್ರೀಪಾದ ಹೆಗಡೆ ಶುಂಠಿ, ರಾಧಾಕೃಷ್ಣ ಬೆಳೆಯೂರು, ಆದಿತ್ಯ ಹಲ್ಕೋಡ್, ಕಾರ್ತಿಕ ದಂಟಕಲ್, ತಮ್ಮ ನಿರ್ವಹಣೆಯ ಪಾತ್ರಗಳನ್ನು ಆಕರ್ಷಕವಾಗಿ ಪೋಷಿಸಿ, ಪ್ರದರ್ಶನ ಯಶಸ್ವಿಯಾಗುವಲ್ಲಿ ಸಹಕರಿಸಿದರು. ಶಾಸ್ತ್ರ ಬದ್ಧವಾದ ಚೌಕಿಮನೆ ಪೂಜೆ, ಬಾಲ ಗೋಪಾಲ ನೃತ್ಯ, ತೆರೆ ಕುಣಿತ ಜನರ ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಹುಕ್ಲಮಕ್ಕಿ ಮೇಳಕ್ಕೆ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಮೇಳದ ಸಂಚಾಲಕ, ಕ್ರಿಯಾಶೀಲ ವ್ಯಕ್ತಿತ್ವದ ಶಬರನ ಪಾತ್ರ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ ಡಾಕ್ಟರ್ ಶ್ರೀಪಾದ್ ಹೆಗಡೆಯವರನ್ನು ಸನ್ಮಾನಿಸಲಾಯಿತು. ಶ್ರೀ ಗಿಂಡಿಮನೆ ಮೃತ್ಯುಂಜಯ, ಶ್ರೀಮತಿ ಗೌರಿ ಪಂಡಿತ, ಶ್ರೀಮತಿ ಗೀತಾ ಸಭಾಹಿತ, ನಿಯಂತ್ರಣಾಧಿಕಾರಿ ಗಿರೀಶ ಸನ್ಮಾನಿಸುವಲ್ಲಿ ಸಹಕರಿಸಿದರು.
ಮೇಳದ ಪರವಾಗಿ ಸನ್ಮಾನ ಸ್ವೀಕರಿಸುತ್ತಾ ಡಾಕ್ಟರ್ ಶ್ರೀಪಾದ್ ಹೆಗಡೆಯವರು ಹುಕ್ಲಮಕ್ಕಿ ಮೇಳದ ಆಶಯದಂತೆಯೇ ಲೆಕ್ಕಾಧಿಕಾರಿಗಳ ಸಂಘವು ಕನ್ನಡ ನಾಡು ನುಡಿಗಾಗಿ ಪ್ರತಿ ತಿಂಗಳೂ ಇಂತಹ ಸಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದನ್ನು ಶ್ಲಾಘಿಸಿ, ಕಲೆಯು ಉಳಿದು ಬೆಳೆಯಲು ಪ್ರೇಕ್ಷಕರ ಪ್ರೋತ್ಸಾಹ ಮುಖ್ಯ ಎಂದು ತಿಳಿಸಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ವಿಶ್ವೇಶ್ವರ ಗಾಯತ್ರಿ ಎಲ್ಲರನ್ನೂ ವಂದಿಸುತ್ತ, ಹಿಂದಿನ ಕಾಲದಲ್ಲಿ ಅಂದರೆ ಮೇಳ ಸ್ಥಾಪಿತವಾದ ಸಂದರ್ಭದಲ್ಲಿ ಊರಿನ ಪ್ರಮುಖರೊಬ್ಬರು, ಒಂದು ತಾಂಬೂಲ/ ವೀಳ್ಯವನ್ನಷ್ಟೇ ನೀಡಿ ಒಂದು ಆಟ ಆಗಬೇಕೆಂದು ವಿನಂತಿಸಿಕೊಂಡಾಗ, ಮೇಳದ ಕಲಾವಿದರೇ ಸ್ವತಹ ದೀಪದ ವ್ಯವಸ್ಥೆ, ಬಣ್ಣ, ಪೋಷಕಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗಿ, ಕಲೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಪಟ್ಟ ಪರಿಶ್ರಮವನ್ನು ಹೇಳುತ್ತಾ, ಕರ್ನಾಟಕದ ಸಾಂಸ್ಕೃತಿಕ ಲಾಂಛನವಾಗಲಿರುವ ಯಕ್ಷಗಾನದ ವಿಶೇಷತೆ ತಿಳಿಸಿ, ಹುಕ್ಕಲಮಕ್ಕಿ ಮೇಳದಿಂದ ಒಂದು ಪ್ರದರ್ಶನ ಆಗಬೇಕೆಂದು ವಿನಂತಿಸಿಕೊಂಡಾಗ, ರಾಮ ಲಕ್ಷ್ಮಣರು, ಲವ-ಕುಶರಂತೆಯೋ ಇರುವ ಗೋಪಾಲಕೃಷ್ಣ ಹೆಗಡೆ- ಡಾ. ಶ್ರೀಪಾದ ಹೆಗಡೆ ಸಹೋದರರು ಸಮ್ಮತಿಸಿ ಉದಾರತೆ ತೋರಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೈಕೋರ್ಟ್ ಹಿರಿಯ ಅಡ್ವೋಕೇಟ್ ಗಣಪತಿ ಹೆಗಡೆ, ಜಿ.ಜಿ. ಹೆಗಡೆ ತಲೇಕೇರಿ, ಬನವಾಸಿ ಕೃಷ್ಣಮೂರ್ತಿ, ಡಾ. ಅಂಬುಜಾಕ್ಷಿ ಬೀರೇಶ್, ಡಾ. ರಾಣಿ ಗೋವಿಂದರಾಜ್, ಸಂಘದ ಸದಸ್ಯರುಗಳಾದ ಪ್ರಫುಲ್ಲಾ ಹೆಗಡೆ, ಉಲಿಗೆ ಸ್ವಾಮಿ, ಬಿ. ಸತ್ಯನಾರಾಯಣ, ಬಸವರಾಜು, ಈರಪ್ಪ, ಎಸ್. ಶಂಕರ್, ವಿನಾಯಕ ಭಟ್, ಓಣಿ ವಿಘ್ನೇಶ್ವರ, ರಮೇಶ ಹಾಸ್ಯಗಾರ, ಪಂಚಾಕ್ಷರಯ್ಯ ಹಿರೇಮಠ್, ಪ್ರಕಾಶ ಪೂರ್ಣಮಠ, ದುಗ್ಗೂರು ಜೀವಿ, ಶ್ರೀನಿವಾಸ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
