ಮಡಿಕೇರಿ : ಕನ್ನಡ ಭವನ ಕೊಡಗು ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಡಿಕೇರಿಯ ಪತ್ರಿಕಾ ಭವನದಲ್ಲಿ ದಿನಾಂಕ 09 ನವೆಂಬರ್ 2025ರಂದು ಲೇಖಕಿ ರುಬೀನಾ ಎಂ.ಎ. ಇವರ ಚೊಚ್ಚಲ ಕೃತಿ ‘ಕಣ್ಣಾ ಮುಚ್ಚಾಲೆ’ಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕೃತಿ ಬಿಡುಗಡೆಗೊಳಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ “ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಿದ್ದು, ಪ್ರತಿಯೊಬ್ಬರು ಪುಸ್ತಕ ಓದುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕು. ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿದ್ದರು. ಇಂದು ಮಹಿಳೆಯರು ಪುರುಷರಿಗೆ ಸಮಾನವಾಗಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಹಿಂದೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಿತ್ತು. ಇಂದು ಅತಿಯಾದ ತಂತ್ರಜ್ಞಾನದ ಬಳಕೆಯಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಆಸಕ್ತಿ ಹೊಂದಬೇಕು. ಪುಸ್ತಕ ರಚನೆ ಕಷ್ಟಕರ ಕೆಲಸ, ಆದರೂ ಸವಾಲಿನ ನಡುವೆ ಮಹಿಳಾ ಪ್ರಧಾನವಾದ ಪುಸ್ತಕವನ್ನು ರುಬೀನಾ ಅವರು ಹೊರತಂದಿದ್ದು, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.” ಪುಸ್ತಕ ಪ್ರಚಾರಕ್ಕೆ ತಾನು ಸಹಕಾರ ನೀಡುವುದಾಗಿ ಇದೇ ಸಂದರ್ಭ ಶಾಸಕರು ಭರವಸೆ ನೀಡಿದರು.
ಕನ್ನಡ ಭವನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಅವರು ಮಾತನಾಡಿ, “ಅಕ್ಷರ ರೂಪದಲ್ಲಿರುವ ಪುಸ್ತಕಗಳಿಗೆ ಎಂದೂ ಸಾವಿಲ್ಲ. ಪ್ರಪಂಚದಲ್ಲಿ ಸಾಕಷ್ಟು ಪುರಾತನ ಕೋಟೆ ಕೊತ್ತಲಗಳು ನಶಿಸಿ ಹೋಗಿವೆ. ಆದರೆ ವೇದಶಾಸ್ತ್ರ್ರ, ಉಪನಿಷತ್ತು, ಬೈಬಲ್, ಕುರಾನ್‌ಗಳ ಮೂಲಕ ಅಕ್ಷರ ಕ್ರೋಢೀಕರಣ ಉಳಿದುಕೊಂಡಿದೆ. ಆದ್ದರಿಂದ ಬರಹಗಾರರು ತಮ್ಮ ಆಶಯಗಳನ್ನು ಅಕ್ಷರ ರೂಪದಲ್ಲಿ ಉಳಿಸಿ, ಮುಂದಿನ ತಲೆಮಾರಿಗೆ ದಾರಿ ದೀಪವಾಗಬೇಕು” ಎಂದರು.

ಹಿರಿಯ ಸಾಹಿತಿ ಭಾರಧ್ವಾಜ್ ಕೆ. ಆನಂದ ತೀರ್ಥ ಇವರು ಮಾತನಾಡಿ, “ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಬೆಂಬಲ ನೀಡಬೇಕು. ಸದಾ ಸವಾಲುಗಳ ನಡುವೆ ಬದುಕುವ ಮಹಿಳೆಯರು ಪುಸ್ತಕಗಳನ್ನು ಓದುವ ಮೂಲಕ ಜೀವನ ಅನುಭವವನ್ನು ಹೆಚ್ಚಿಸಿಕೊಳ್ಳಬೇಕು. ಕೊಡಗಿನಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆ ಇದೆ, ಪರಸ್ಪರ ಬೆನ್ನು ತಟ್ಟಿಕೊಳ್ಳುವವರೇ ಹೆಚ್ಚು ಇದ್ದಾರೆ. ಆದ್ದರಿಂದ ತಮ್ಮನ್ನು ತಾವು ವಿಮರ್ಶೆಗೆ ಒಳಪಡಿಸಿಕೊಳ್ಳುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ಮಾತನಾಡಿ “ಕಣ್ಣಾ ಮುಚ್ಚಾಲೆ ಕಾದಂಬರಿ ಕುಟುಂಬವೊಂದರ ಏಳುಬೀಳಿನ ಹಾದಿಯ ಮೇಲೆ ಬೆಳಕು ಚೆಲ್ಲಿದೆ. ತನ್ನ ಬದುಕನ್ನು ಕಟ್ಟಿಕೊಳ್ಳಲು ಮತ್ತು ಬದುಕಿನ ಗೌರವವನ್ನು ರಕ್ಷಿಸಿಕೊಳ್ಳಲು ಕಥಾ ನಾಯಕಿ ಪಡುವ ಶ್ರಮದ ಹಂದರ ಇದರಲ್ಲಿದೆ. ಜೀವನದ ತೂಗುಯ್ಯಾಲೆಯ ಏರಿಳಿತದ ಪರಿವೇ ಇಲ್ಲದೆ, ಸದಾ ದಾಂಗುಡಿಯಿಡುವ ಸಮಯದ ಜೊತೆ ಹೊಂದಿಕೊಳ್ಳುವ ರಾಧಾಳ ಕಥೆಯಾಗಿದೆ.” ಉತ್ತಮವಾದ ಈ ಪುಸ್ತಕವನ್ನು ಎಲ್ಲರೂ ಕೊಂಡು ಓದುವಂತೆ ತಿಳಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ನವಿತಾ ರೈಯವರು ಮಾತನಾಡಿ, “ಇಂದು ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಕಣ್ಣಾ ಮುಚ್ಚಾಲೆ ಪುಸ್ತಕದ ಹೆಸರೇ ಪ್ರತಿಯೊಬ್ಬರ ಬಾಲ್ಯವನ್ನು ನೆನಪಿಸುತ್ತದೆ. ರುಬೀನಾ ಅವರು ಸರಳ ಭಾಷೆಯಲ್ಲಿ ಹೆಣ್ಣಿನ ಭಾವನೆಯನ್ನು ಪುಸ್ತಕದ ರೂಪದಲ್ಲಿ ಹೊರ ತಂದಿರುವುದು ಶ್ಲಾಘನೀಯ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ “ಸಾಮಾಜಿಕ ಜಾಲತಾಣ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಪಸ್ತುತ ದಿನಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಪುಸ್ತಕದ ರೂಪದಲ್ಲಿ ಸಾಹಿತ್ಯವನ್ನು ಓದುವವರ ಸಂಖ್ಯೆ ಕ್ಷೀಣಿಸಿದೆ. ಶುಭ ಸಮಾರಂಭಗಳಲ್ಲಿ ಪ್ರತಿಯೊಬ್ಬರು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಓದಲು ಉತ್ತೇಜನವನ್ನು ನೀಡಬೇಕು ಮತ್ತು ಬರಹಗಾರರನ್ನು ಪ್ರೋತ್ಸಾಹಿಸಬೇಕು” ಎಂದು ಹೇಳಿದರು.

‘ಕಣ್ಣಾ ಮುಚ್ಚಾಲೆ’ ಪುಸ್ತಕದ ಲೇಖಕಿ ರುಬೀನಾ ಎಂ.ಎ. ಅವರು ಮಾತನಾಡಿ, “ಬಡತನ, ಹಠ ಮತ್ತು ಸಮಾಜಸೇವೆ ತಾವು ಬರಹಗಾರರಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಹೆಣ್ಣು ಮಕ್ಕಳ ಬಗ್ಗೆ ಟೀಕೆ ಟಿಪ್ಪಣಿಗಳು ಸಹಜವಾಗಿದ್ದು, ಅದನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಸಾಗಬೇಕು” ಎಂದು ತಿಳಿಸಿದರು. ಹಲವರ ಸಹಕಾರದಿಂದ ಪುಸ್ತಕ ಲೋಕಾರ್ಪಣೆಗೊಂಡಿದ್ದು, 6 ವರ್ಷಗಳ ಕನಸು ನನಸಾಗಿದೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು.

ಮರ್ಕರ ಪೋಸ್ಟ್ ಪತ್ರಿಕೆ ಸಂಪಾದಕ ಜೈರೋಸ್ ಥೋಮಸ್ ಅಲೆಕ್ಸಾಂಡರ್ ಮಾತನಾಡಿ ಶುಭಹಾರೈಸಿದರು. ಅಂತರರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಮಿಂಚಿದ ಸಿದ್ದಾಪುರದ ರಿಮ್ಸಾ ಖಾನಂ ಎಂ.ಆರ್. ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕನ್ನಡ ಭವನ ಮತ್ತು ಗೆಳೆಯರ ಬಳಗದಿಂದ ಲೇಖಕಿ ರುಬೀನಾ ಎಂ.ಎ. ಇವರನ್ನು ಸನ್ಮಾನಿಸಲಾಯಿತು. ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಹಾಗೂ ಪುಸ್ತಕದ ಪುಟ ವಿನ್ಯಾಸಗೊಳಿಸಿದ ಕೆ.ಎಂ. ವಿನೋದ್ ಇವರನ್ನು ಕೂಡ ಸನ್ಮಾನಿಸಿ, ಗೌರವಿಸಲಾಯಿತು. ಗಾಯತ್ರಿ ಚೆರಿಯಮನೆ ಪ್ರಾರ್ಥಿಸಿ, ಹರ್ಷಿತಾ ಶೆಟ್ಟಿ ಸ್ವಾಗತಿಸಿ, ಕಿಶೋರ್ ರೈ ನಿರೂಪಿಸಿ, ವಿಜಯ್ ಹಾನಗಲ್ ರುಬೀನಾರ ಪರಿಚಯ ಮಾಡಿ, ಬೊಟ್ಟೋಳಂಡ ನಿವ್ಯ ಕಾವೇರಮ್ಮ ವಂದಿಸಿದರು.
