ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಬ್ರಹ್ಮಾವರ ಇವರ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ನಾಲ್ಕನೇ ವರ್ಷದ ನುಡಿಚಿತ್ತಾರ ಕಾರ್ಯಕ್ರಮವು ದಿನಾಂಕ 09 ನವೆಂಬರ್ 2025ರಂದು ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವು ದೀಪ ಬೆಳಗಿಸಿ, ನಿತ್ಯೋತ್ಸವ ಹಾಡಿನೊಂದಿಗೆ ಆರಂಭಗೊಂಡಿತು. ಕವಿ, ಅನುವಾದಕರಾಗಿರುವ ಶಂಕರ್ ಕೆಂಚನೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ಭಾಷೆ ಎಂದರೆ ಕೇವಲ ಸಾಹಿತ್ಯವಲ್ಲ, ಅದರ ಸುತ್ತಮುತ್ತಲಿನ ಎಲ್ಲವೂ ಕೂಡ ಭಾಷೆಗೆ ಸಂಬಂಧಿಸಿದ್ದು, ಸಾಹಿತ್ಯ ಹೆಚ್ಚಾಗಿ ಆಚರಿಸಲ್ಪಡುತ್ತದೆ” ಎಂದರು.

ಲೇಖಕಿ, ಪ್ರಾಂಶುಪಾಲರಾದ ಅಭಿಲಾಷ ಹಂದೆ ಇವರು ಮಾತನಾಡಿ “ನಮ್ಮ ತಾಯ್ನುಡಿ ಕನ್ನಡ ನಮ್ಮ ಜೀವಕ್ಕೆ, ನಮ್ಮ ಭಾವಕ್ಕೆ ಅಂಟಿಕೊಂಡಿರುತ್ತೆ. ಅದು ನಮ್ಮ ಸಂಸ್ಕೃತಿಗಳನ್ನ ತೆರೆಯಬಲ್ಲಂಥಹ ಬೀಗದ ಕೈ” ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಬ್ರಹ್ಮಾವರ ವ್ಯವಸಾಯ ಸಹಕಾರಿ ಸಂಘ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಬಿರ್ತಿ ಹಾಗೂ ಬ್ರಹ್ಮಾವರ ಎಸ್.ಎಮ್.ಎಸ್. ಪ.ಪೂ ಕಾಲೇಜಿನ ಪ್ರಾಂಶುಪಾಲರು ಐವನ್ ಡೊನಾತ್ ಸುವಾರಿಸ್ ಇವರು ಉಪಸ್ಥಿತರಿದ್ದರು.


ತದನಂತರ ಮಕ್ಕಳ ಕಥೆ ಹೇಳುವ ಸ್ಪರ್ಧೆ ನೆರವೇರಿತು. ಈ ವೇಳೆ ತೀರ್ಪುಗಾರರಾಗಿ ಖ್ಯಾತ ಚಲನಚಿತ್ರ ನಟಿ ಪ್ರತಿಮಾ ನಾಯಕ್; ನಟಿ, ನಿರ್ದೇಶಕಿ ಶಿಲ್ಪಾ ಶೆಟ್ಟಿ; ಲೇಖಕರಾದ ರಮೇಶ್ ಗುಲ್ವಾಡಿಯವರು ತೀರ್ಪುಗಾರರಾಗಿ ಸಹಕರಿಸಿದರು. ಬಳಿಕ ಕನ್ನಡ ನಾಡು ನುಡಿ ಸಂಸ್ಕೃತಿಯ ಕುರಿತು ಛದ್ಮವೇಷ ಸ್ಪರ್ಧೆ ನೆರವೇರಿತು. ಈ ವೇಳೆ ಕಲಾವಿದರಾದ ಉಜ್ವಲ್ ಯು.ವಿ., ಸಂಗೀತಗಾರರಾದ ಶುಭಕರ್ ಪುತ್ತೂರು ಇವರು ತೀರ್ಪುಗಾರಿಕೆಯಲ್ಲಿ ಸಹಕರಿಸಿದರು. ನಂತರ ಸಮಾರೋಪ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ನಟ ರಘು ಪಾಂಡೇಶ್ವರ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಂದ ಅವಕಾಶಗಳನ್ನ ಕೈಚೆಲ್ಲಿ ಕೂರಬೇಡಿ ಅವಕಾಶಗಳು ಮತ್ತೆ ನಮ್ಮನ್ನ ಹುಡುಕಿಕೊಂಡು ಬರಲಾರವು ಎಂದು ಮಕ್ಕಳಿಗೆ ಕಿವಿಮಾತು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಕೊನೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿತು. ಮಕ್ಕಳಿಗಾಗಿ ಕತೆ ಹೇಳುವ ಸ್ಪರ್ಧೆಯಲ್ಲಿ ಆಧ್ಯಾ ಎಮ್. ಬಿಲ್ಲವ ಪ್ರಥಮ ಸ್ಥಾನ ಪಡೆದು ರೂ.3,000/-, ಸಾನಿಧ್ಯ ದ್ವಿತೀಯ ರೂ.2,000/-, ಆಧ್ಯಾ ತೃತೀಯ ಸ್ಥಾನ ರೂ.1,000/- ಪಡೆದು ವಿಜೇತರಾದರು. ರಿತನ್ಯ ಆರ್., ಪ್ರಣಮ್ಯ ಬಿದ್ಕಲ್ ಕಟ್ಟೆ ಮೆಚ್ಚುಗೆ ಪ್ರಶಸ್ತಿ ಪಡೆದುಕೊಂಡರು.
ಛದ್ಮವೇಷ ಸ್ಪರ್ಧೆಯಲ್ಲಿ ಸಿಂಚನಾ ನಾಯ್ಕ್ ಪ್ರಥಮ ರೂ.6,000/-, ಶ್ವೇತಾ ಪ್ರಸನ್ನ ದ್ವಿತೀಯ ರೂ.4,000/- ಹಾಗೂ ಭೂಮಿಕಾ ತೃತೀಯ ಸ್ಥಾನ ರೂ.2,000/- ಹಾಗೂ ಅನೈರಾ ಕೋಟ್ಯಾನ್ ಸಮಾಧಾನಕರ ರೂ.1,000/- ಬಹುಮಾನಗಳನ್ನು ಪಡೆದರು.
ಇನ್ನು ಈ ಬಾರಿ ಹೊಸದಾಗಿ ಪರಿಚಯಿಸಿದ ರೀಲ್ಸ್ ಸ್ಪರ್ಧೆಯಲ್ಲಿ ಪ್ರಥಮ ರೂ.3,000/- ಚಂದನ್ ಎಂ. ಕೆಬ್ಬೆಹುಂಡಿ ಬಹುಮಾನ ಪಡೆದು, ವತ್ಸಲಾ ಶಾಸ್ತ್ರೀ ವತ್ಸಲಾ ನಕ್ಷತ್ರಿ ದ್ವಿತೀಯ ಸ್ಥಾನ ರೂ.2,000/- ಪಡೆದುಕೊಂಡರು. ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕಗಳನ್ನ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಲಯನ್ ಜಿ. ಬಾಲಕೃಷ್ಣ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುದೇಶ್ ಕುಮಾರ್ ಶೆಟ್ಟಿ, ತೀರ್ಪುಗಾರರಾದ ಪ್ರತಿಮಾ ನಾಯಕ್, ಮಂದಾರದ ಅಧ್ಯಕ್ಷರಾದ ರೋಹಿತ್ ಬೈಕಾಡಿ, ಕಾರ್ಯದರ್ಶಿ ಪ್ರಸಾದ್ ಬ್ರಹ್ಮಾವರ ಇವರು ಉಪಸ್ಥಿತರಿದ್ದರು. ಗೌತಮ್ ಬ್ರಹ್ಮಾವರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
