ಬೆಂಗಳೂರು : ಶುಭದ ಚಾರಿಟಬಲ್ ಟ್ರಸ್ಟ್, ಅಕ್ಷಯ ಸೇವಾ ಫೌಂಡೇಶನ್, ರಂಗಮಂಡಲ ಮತ್ತು ಸ್ನೇಹ ಸೇವಾ ಫೌಂಡೇಶನ್ ಇವುಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಶುಭ ಸಮಾರಂಭದಲ್ಲಿ ಶ್ರೀ ಪಾಲನೇತ್ರರಿಗೆ ಅಭಿನಂದನೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ 16 ನವೆಂಬರ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಶರಣ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಉದ್ಘಾಟನೆ ಮಾಡಿ ಕನ್ನಡ ಚಳವಳಿಗಾರ ಶ್ರೀ ಪಾಲನೇತ್ರರಿಗೆ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಗಾನ ಸಿದ್ಧಗಂಗಾ ಕಲ್ಚರಲ್ ಟ್ರಸ್ಟ್ ಇದರ ಶ್ರೀಮತಿ ಗೀತಾ ಭತ್ತದ್ ತಂಡದವರಿಂದ ಕನ್ನಡ ಗೀತ ಗಾಯನ ಪ್ರಸ್ತುತಗೊಳ್ಳಲಿದೆ. ವಿಚಾರ ಸಂಕಿರಣದಲ್ಲಿ ‘ಗಾಯತ್ರಿ ನಗರ, ಶ್ರೀರಾಂಪುರ, ಪ್ರಕಾಶನಗರ, ಪರಿಸರದ ಕನ್ನಡ ಚಳವಳಿ’ ಎಂಬ ವಿಷಯದ ಬಗ್ಗೆ ಮಾಜಿ ಮಹಾ ಪೌರ ಜೆ. ಹುಚ್ಚಪ್ಪ, ‘ನಾಡಪ್ರಭು ಕೆಂಪೇಗೌಡರು ಕಟ್ಟಿದ ಕನ್ನಡಿಗರ ಬೆಂಗಳೂರು’ ಎಂಬ ವಿಷಯದ ಬಗ್ಗೆ ಇತಿಹಾಸ ತಜ್ಞರಾದ ಡಾ. ತಲಕಾಡು ಚಿಕ್ಕರಂಗೇಗೌಡ, ‘ಬೆಂಗಳೂರಿನ ಬಡಾವಣೆಗಳು : ಕನ್ನಡದ ಸ್ಥಿತಿಗತಿ’ ಎಂಬ ವಿಷಯದ ಬಗ್ಗೆ ಯಶವಂತಪುರ ಕ್ಷೇತ್ರ ಕ.ಸಾ.ಪ.ದ ಅಧ್ಯಕ್ಷರಾದ ಹೆಚ್.ಎಸ್. ಸುಧೀಂದ್ರ ಕುಮಾರ್ ಇವರು ವಿಷಯ ಮಂಡನೆ ಮಾಡಲಿದ್ದಾರೆ.

