ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ವಚನ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ದಿನಾಂಕ 07 ನವೆಂಬರ್ 2025ರಂದು ಆಯೋಜಿಸಿದ್ದ ರಸಪ್ರಶ್ನೆಯ 2ನೇ ಸರಣಿ ಕಾರ್ಯಕ್ರಮವನ್ನು ಬೆಸೆಂಟ್ ಹಿರಿಯ ಪ್ರೌಢಶಾಲೆ ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ತ್ರಿವೇಣಿ ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳಿಗಾಗಿ ನಡೆಸುವ ಈ ಕಾರ್ಯಕ್ರಮ ಉತ್ತಮವಾಗಿದೆ ಮತ್ತು ಸಾಹಿತ್ಯದ ಬಗ್ಗೆ ಒಲವನ್ನು ಮೂಡಿಸುವಲ್ಲಿ ಅನುಕೂಲವಾಗಿದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರು “ಮಕ್ಕಳು ಬಾಲ್ಯದಲ್ಲಿಯೇ ಶರಣರು ವಚನಗಳಲ್ಲಿ ಹೇಳಿದ ಒಳ್ಳೆಯ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೊಡ್ಡ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ರಾವ್ ಇವರು “ಕನ್ನಡ ಮಾಧ್ಯಮದಲ್ಲಿ ಕಲಿತಂತಹ ಅನೇಕ ಸಾಧಕರು ನಮ್ಮ ಮುಂದಿದ್ದಾರೆ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಓದುವಂತಹ ಮಕ್ಕಳು ಯಾವುದೇ ಸ್ಪರ್ಧೆಗೆ ತಯಾರಾಗಿದ್ದಾರೆ. ಅವರು ತಮ್ಮ ಪ್ರತಿಭೆಯ ಮೂಲಕ ಭಾಷೆಯನ್ನು ಉಳಿಸಿ ಬಳಸಬೇಕು” ಎಂದು ಅಭಿಪ್ರಾಯಪಟ್ಟರು.

ಸಂಘದ ಅಧ್ಯಕ್ಷ ಶ್ರೀಮತಿ ಸುಮಾ ಅರುಣ್ ಮಾನ್ವಿ ಇವರು ತಮ್ಮ ಪ್ರಸ್ತಾವಿಕದಲ್ಲಿ ಸಂಘ ಕಳೆದ 13 ವರ್ಷದಿಂದ ನಡೆಸಿಕೊಂಡು ಬಂದಂತಹ ಕಾರ್ಯಕ್ರಮಗಳಲ್ಲಿ ವಚನ ಸಂಭ್ರಮ ಒಂದು ಭಾಗವಾಗಿದ್ದು, ಇದು ಈ ವರ್ಷ 11ನೇ ವಚನ ಸಂಭ್ರಮವಾಗಿದೆ. ಈ ವರ್ಷ ನಾವೇ ಶಾಲೆಗೆ ತೆರಳಿ ಮಕ್ಕಳಿಗೆಗಾಗಿ ಸ್ಪರ್ಧೆಯನ್ನು ಆಯೋಜನೆ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಶಾಲೆಯಲ್ಲಿ 109 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.” ಎಂದು ತಿಳಿಸಿದರು.

ಇಂಚರ ತಂಡದ ಸದಸ್ಯರು ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಗೀತೆಗಳನ್ನು ಮತ್ತು ವಚನಗಳನ್ನು ಹಾಡಿದರು. ಶ್ರೀಮತಿ ಅನುಪಮ ಸ್ವಾಗತಿಸಿ, ಶ್ರೀಮತಿ ಉಮಾ ಪಾಲಾಕ್ಷಪ್ಪ ವಂದಿಸಿ, ಶ್ರೀಮತಿ ಮಣಿ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿದ್ಯಾ ಮತ್ತು ಎಲ್ಲಾ ಸದಸ್ಯರು ಮತ್ತು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ರಸಪ್ರಶ್ನೆ ವಿಜೇತರು ಪ್ರಥಮ – ಕುಮಾರಿ ಪ್ರತೀಕ್ಷಾ, ಕಾಜಲ್, ದ್ವಿತೀಯ – ಪೂಜಾ, ತೃತೀಯ – ಭುವನೇಶ್ವರಿ, ಗದಿಗೆಪ್ಪ, ರಿತೇಶ್ ಕುಮಾರ್ ಬಹುಮಾನವನ್ನು ಗಳಿಸಿದರು.
