ಬೆಂಗಳೂರು : ಮಲೆನಾಡ ಬರಹಗಾರರ ವೇದಿಕೆ ಹೊರ ತಂದಿರುವ ‘ಕಾಡಸುರಗಿ’ ಕೃತಿಯು ದಿನಾಂಕ 15 ನವಂಬರ್ 2025ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಲೋಕಾರ್ಪಣೆಗೊಂಡಿತು.
ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ “ಮಲೆನಾಡಿನಲ್ಲಿಯೂ ಇಂದು ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಒಂದು ಕಾಲದಲ್ಲಿದ್ದ ದಟ್ಟ ಕಾಡು, ನೀರಿನ ಸೆಲೆ ಎಲ್ಲವೂ ಇಂದು ಇತಿಹಾಸದ ಪುಟವನ್ನು ಸೇರಿವೆ. ಸವಾಲಿನ ದಿನಗಳಲ್ಲಿ ಮಲೆನಾಡಿನ ಪರಿಸರವನ್ನು ಕಾಪಾಡಿದ ಸಾಧಕರ ಚರಿತ್ರೆ ದಾಖಲಾಗಬೇಕಾದ ಅಗತ್ಯ ಈ ಕಾರಣದಿಂದ ಹೆಚ್ಚಾಗಿದೆ. ‘ಕಾಡಸುರಗಿ’ ಎನ್ನುವ ಹೆಸರೇ ಮಲೆನಾಡಿನ ಅಸ್ಮಿತೆಯನ್ನು ಸೂಚಿಸುತ್ತದೆ. ಈ ಕೃತಿಯಲ್ಲಿ ಮಲೆನಾಡಿನ ನಲವತ್ತು ಸಾಧಕರ ಸಾರ್ಥಕ ವ್ಯಕ್ತಿಚಿತ್ರಣಗಳಿವೆ. ಇದೊಂದು ಮಾಲಿಕೆಯಾಗಿ ಬೆಳೆದರೆ ಮಹತ್ವದ ಸಾಂಸ್ಕೃತಿಕ ದಾಖಲೀಕರಣವಾಗುತ್ತದೆ. ಈ ವೇದಿಕೆಯ ಮೂಲಕ ಮಲೆನಾಡಿಗರು ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳುವಂತಾಗಲಿ” ಎಂದು ಆಶಿಸಿದರು.
ಪ್ರಸ್ತಾವಿಕ ಭಾಷಣ ಮಾಡಿದ ಮಲೆನಾಡು ಬರಹಗಾರರ ವೇದಿಕೆಯ ಅಧ್ಯಕ್ಷ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ “ಮಲೆನಾಡು ಬರಹಗಾರರ ವೇದಿಕೆ ಮಲೆನಾಡಿನ ಪ್ರತಿಭಾವಂತರ ಸೃಜನಶೀಲ ತಾಣವಾಗಿದ್ದು, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಶಿಬಿರಗಳನ್ನು, ವಿಚಾರ ಸಂಕಿರಣಗಳನ್ನು, ಪ್ರಾತ್ಯಕ್ಷಿಕೆಗಳನ್ನು, ಸಮ್ಮೇಳನವನ್ನೂ ಏರ್ಪಡಿಸುವ ಉದ್ದೇಶವಿದೆ” ಎಂದರು.
ಮುಖ್ಯ ಅತಿಥಿಗಳಾಗಿದ್ದ ಖ್ಯಾತ ಗಾಯಕಿ ನಾಡೋಜ ಡಾ. ಬಿ.ಕೆ. ಸುಮಿತ್ರ ತಮ್ಮ ಮಲೆನಾಡಿನ ಬೇರುಗಳನ್ನು ನೆನಪು ಮಾಡಿಕೊಂಡು ಸದಾ ಮಲೆನಾಡಿಗರ ತುಡಿತದ ಜೊತೆಗೆ ನಾನಿರುವೆ” ಎಂದರು. ಇನ್ನೊಬ್ಬ ಮುಖ್ಯ ಅತಿಥಿ ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಡಾ. ಬಿ.ಆರ್. ಗುರುಪ್ರಸಾದ್ ಮಾತನಾಡಿ “ವ್ಯಕ್ತಿಚಿತ್ರಗಳನ್ನು ಈ ಕೃತಿಯಲ್ಲಿ ಮೂಡಿಸಿರುವ ಕ್ರಮ ಗಮನಾರ್ಹವಾಗಿದೆ. ಇದೊಂದು ಪರಂಪರೆಯ ಚಿತ್ರಣವನ್ನು ಕೊಡುತ್ತದೆ. ಬೇರೆ ಭಾಗದವರಿಗೂ ಇಂತಹ ಸಂಕಲನ ತರಲು ಪ್ರೇರಣೆ ತರುವಂತಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಮಾತನಾಡಿ “ಮಲೆನಾಡಿನ ಸಾಧಕರ ಕೃತಿ ವಿಶಿಷ್ಟವಾಗಿ ಮೂಡಿ ಬಂದಿದೆ. ಇಷ್ಟೊಂದು ಸಾಧಕರು ಈ ಭಾಗದಿಂದ ಬಂದಿದ್ದಾರೆ ಎನ್ನುವ ಅಚ್ಚರಿ ಜೊತೆಗೆ ಹೆಮ್ಮೆಯನ್ನೂ ಕೃತಿ ತರುತ್ತದೆ. ಮಲೆನಾಡಿನ ಸಾಧಕರು ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದಾರೆ. ಇಂದಿಗೂ ವಿರೋಧ ಪಕ್ಷದ ನಾಯಕರು ಹೇಗಿರಬೇಕು ಎನ್ನುವುದಕ್ಕೆ ಶಾಂತವೇರಿ ಗೋಪಾಲ ಗೌಡರು ಉದಾಹರಣೆಯಾದರೆ ಮುಖ್ಯಮಂತ್ರಿಗಳು ಹೇಗಿರಬೇಕು ಎನ್ನುವುದಕ್ಕೆ ಕಡಿದಾಳ್ ಮಂಜಪ್ಪನವರು ಉದಾಹರಣೆಯಾಗಿದ್ದಾರೆ. ಅವರಿಬ್ಬರೂ ಮಲೆನಾಡು ಭಾಗದಿಂದ ಬಂದವರು. ಈಶಾನ್ಯ ರಾಜ್ಯಗಳಂತೆ ಮಲೆನಾಡು ಭಾಗಕ್ಕೂ ಜನಸಂಖ್ಯೆ ಆಧರಿತ ಪ್ರಾತಿನಿಧ್ಯದ ಬದಲು ಪ್ರದೇಶವನ್ನು ಆಧರಿಸಿದ ಪ್ರಾತಿನಿಧ್ಯವನ್ನು ನೀಡಬೇಕು. ಇಂತಹ ಹಲವು ಹೋರಾಟಕ್ಕೆ ವೇದಿಕೆ ಸಜ್ಜಾಗಲಿ. ಯಾವುದೇ ರಚನಾತ್ಮಕ ಕಾರ್ಯಕ್ರಮಗಳಿಗೆ ಚಿತ್ರಕಲಾ ಪರಿಷತ್ತಿನ ಸಹಕಾರವಿರುತ್ತದೆ” ಎಂದು ಹೇಳಿದರು. ಡಾ. ಎಂ.ಎ. ಜಯಚಂದ್ರ ಸ್ವಾಗತ ಭಾಷಣವನ್ನು ಮಾಡಿದರೆ, ಎಚ್.ಸಿ. ಜಯಪ್ರಕಾಶ್ ವಂದನಾರ್ಪಣೆಗಳನ್ನು ಸಲ್ಲಿಸಿದರು. ಡಾ. ಮಾನಸ ಕಾರ್ಯಕ್ರಮವನ್ನು ನಿರೂಪಿಸಿದರು. ಅಪಾರ ಸಂಖ್ಯೆ ಮಲೆನಾಡಿಗರು ಇಡೀ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.
