ಮಡಿಕೇರಿ : ಕೊಡಗಿನ ಪತ್ರಕರ್ತ ಪ್ರಶಾಂತ್ ಟಿ.ಆರ್. ವಿರಚಿತ ‘ಬಾಳ ಹಾದಿಯಲಿ ಬೆಳ್ಳಿಚುಕ್ಕಿ’ ಕಾದಂಬರಿಗೆ ಯುನೈಟೆಡ್ ಕಿಂಗ್‌ಡಮ್‌ನ ಕೊವೆಂಟ್ರಿ ಕನ್ನಡಿಗರು ನೀಡುವ ಪ್ರಶಸ್ತಿಗೆ ಭಾಜನವಾಗಿದೆ. ಇದೇ ತಿಂಗಳು ಕೊವೆಂಟ್ರಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಹಳ್ಳಿಯಲ್ಲಿ ಬೆಳೆದ ಬಡಹುಡುಗ ಪುಟ್ಬಾಲ್‌ನಲ್ಲಿ ವಿಶ್ವಖ್ಯಾತಿ ಗಳಿಸುವ ಕಥನಾ ಈ ಕಾದಂಬರಿಯ ಕಥಾವಸ್ತವಾಗಿದೆ. ಖ್ಯಾತ ನಟ, ನಿರ್ದೇಶಕ ಅನಿರುದ್ಧ ಕಾದಂಬರಿಗೆ ಬೆನ್ನುಡಿ ಬರೆದಿದ್ದು, ಬಾಲಿವುಡ್ ನಟ ಭಾಸ್ಕರ್ ಮುನ್ನುಡಿ ಬರೆದಿದ್ದಾರೆ. ಈ ಹಿಂದೆ ‘ಬಾಳ ಹಾದಿಯಲಿ ಬೆಳ್ಳಿಚುಕ್ಕಿ’ ಕಾದಂಬರಿಗೆ ‘ಇಂಡಿಯನ್ ಐ ಕಾನ್ ಅವಾರ್ಡ್’ ಸಂದಿತ್ತು. ಅಲ್ಲದೆ, ಪ್ರಶಾಂತ್ ವಿರಚಿತ ‘ಹೊನ್ನಮ್ಮನ ಕನಸು’ ಕಾದಂಬರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಂದಿತ್ತು. ಸದ್ಯ ಪ್ರಶಾಂತ್ ರಚಿಸಿರುವ ವಿಲೇಜ್ ಡಾಕ್ಟರ್ ಕಾದಂಬರಿ, ಶಾಂತಿಯ ಸಾಧನೆಯ ಹಾದಿ ಬಯೋಪಿಕ್ ಹಾಗೂ ಮುಳುಗದ ನೌಕೆ ಕಥಾಸಂಕಲನ ಬಿಡುಗಡೆಗೆ ಸಿದ್ಧವಾಗಿದೆ. ವಿಶ್ವವಾಣಿ ಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ್ ಇವರು ಸಾಹಿತ್ಯ ಕೃಷಿಯ ಜತೆಗೆ ಸಿನಿಮಾರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಆರ್ಟಿಕಲ್ 370, ರಾಮಾಚಾರಿ 2 ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ. ಅವಳ ಕಣ್ಣಲಿ ಹಾಗೂ ನನ್ನ ಸೈಕಲ್ ಸವಾರಿ ಕಿರುಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೇನು ಭಾಗೀರಥಿ ಎಂಬ ಕಿರುಚಿತ್ರವೂ ಸೆಟ್ಟೇರಲಿದೆ.
