ಬೆಂಗಳೂರು : ಬೆಂಗಳೂರಿನ ಮಲ್ಲೇಶ್ವರದ ಆಶಾ ರಘು ಇವರ ನಿವಾಸದಲ್ಲಿ ದಿನಾಂಕ 13 ನವೆಂಬರ್ 2025ರಂದು ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ ಎರಡು ಹೊಸ ಕೃತಿಗಳನ್ನು ಲೋಕಾರ್ಪಣೆಗೊಂಡವು.
ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಭಗವಾನ್ ಕೆ. ನಾರಾಯಣ್ “ವಿವಾದಗಳನ್ನೆಲ್ಲಾ ಬದಿಗಿಟ್ಟು, ಸಕಾರಾತ್ಮಕವಾದ ವಿಚಾರಗಳನ್ನಷ್ಟೇ ಉಳ್ಳಂತೆ ನಾಡಿನ ಪ್ರಖ್ಯಾತ ಲೇಖಕರು ಭೈರಪ್ಪನವರಿಗಾಗಿ ಬರೆದ ನುಡಿನಮನದ ಲೇಖನಗಳನ್ನು ಆಶಾ ರಘು ಇವರು ಸಂಪಾದಿಸಿರುವ ‘ಭೈರಪ್ಪನವರೆಡೆಗೆ ಭಾವತಂತು’ ಕೃತಿಯು ಒಳಗೊಂಡಿದೆ. ಇದು ನಿಜಕ್ಕೂ ಬಹಳ ಅರ್ಥಪೂರ್ಣವಾದ ಭಾವನಮನವಾಗಿದೆ” ಎಂದು ಅಭಿಪ್ರಾಯಪಟ್ಟರು.
ಮಾಸ್ಟರ್ ಪ್ರಣವ್ ಭಾರದ್ವಾಜ್ ರಚನೆಯ ‘ಅಂಗದ’ ಎಂಬ ಪೌರಾಣಿಕ ಕಾದಂಬರಿಯ ಕುರಿತು ಮಾತನಾಡುತ್ತಾ, “ಹದಿನೈದರ ಪೋರ ಪ್ರಣವ್ ಭಾರದ್ವಾಜ್ ನ ಸಾಧನೆ ಶ್ಲಾಘನೀಯವಾದುದು. ಅಂಗದನಂತಹ ಪಾತ್ರವನ್ನು ನಿರ್ವಹಿಸಿರುವ ರೀತಿಯಲ್ಲಿ ಲೇಖಕನು ಬೆಳೆದುಬಂದಿರುವ ಸಂಸ್ಕಾರ ಎಂತಹುದೆಂದು ಅರಿವಾಗುತ್ತದೆ” ಎಂದರು.
ಎರಡು ಕೃತಿಗಳ ಕುರಿತು ಪರಿಚಯಿಸಿದ ಲೇಖಕಿ ಉಷಾರಾಣಿ ಟಿ.ಆರ್. ಇವರು, ಭೈರಪ್ಪನವರ ನುಡಿನಮನವು ಸಂಗ್ರಹಯೋಗ್ಯವಾಗಿದೆ ಹಾಗೂ ‘ಅಂಗದ’ ಕಾದಂಬರಿಯು ನವೀನವಾದ ಒಳನೋಟವನ್ನು ನೀಡುತ್ತದೆ ಎಂದರು. ಮುಖ್ಯ ಅತಿಥಿಯಾಗಿದ್ದ ಡಾ. ಪ್ರದೀಪ್ ಬೇಲೂರು ಇವರು “ಶ್ರೀರಾಮನು ತನ್ನ ತಂದೆ ವಾಲಿಯನ್ನು ಕೊಂದರೂ ಅಂಗದ ಧರ್ಮದ ಪಕ್ಷಪಾತಿಯಾಗಿ ಇರುವಂತಹವನು. ಅಂಗದನ ಪಾತ್ರವನ್ನೇ ಆಧರಿಸಿ ಇದುವರೆಗೂ ಯಾವುದೇ ಪ್ರತ್ಯೇಕ ಪುಸ್ತಕ ಬಂದಿಲ್ಲ. ಅಂಗದನ ಬಗೆಗೆ ತಿಳಿದುಕೊಳ್ಳಲು ಬಯಸುವವರು ಈ ಕಾದಂಬರಿಯನ್ನು ಓದಬಹುದು” ಎಂದರು. ಪ್ರಣವ್ ಭಾರದ್ವಾಜ್ ಕಾದಂಬರಿಯ ರಚನೆಯ ಹಿಂದಿನ ತನ್ನ ಅಧ್ಯಯನ, ತಯಾರಿಗಳ ಕುರಿತು ಹಂಚಿಕೊಂಡರೆ, ಸಾಹಿತಿ ಆಶಾ ರಘು ಅವರು ಉಪಸ್ಥಿತರಿದ್ದು, ‘ನನಗೆ ತಿಳಿದಂತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಕಿರಿ ವಯಸ್ಸಿನ ಕಾದಂಬರಿಕಾರ ಎಂದರೆ ಪ್ರಣವ್ ಭಾರದ್ವಾಜ್ ಎನ್ನಿಸುತ್ತದೆ. ವಯಸ್ಸು ಚಿಕ್ಕದಾದರೂ ಪ್ರಬುದ್ಧವಾಗಿ ಬರೆದಿದ್ದಾನೆ’ ಎನ್ನುತ್ತಾ, ಎರಡೂ ಕೃತಿಗಳ ಪ್ರಕಟಣೆಗೆ ನೆರವಾದ ಎಲ್ಲ ಲೇಖಕರ ಸಹಕಾರವನ್ನು ಸ್ಮರಿಸಿದರು.
