ಮಂಗಳೂರು : ಕಟೀಲು ದುರ್ಗಾಪರಮೇಶ್ವರೀ ದೇವಳದ ಯಕ್ಷಗಾನ ತಿರುಗಾಟದ ಆರಂಭದ ಸೇವೆಯಾಟ ಹಾಗೂ ಏಳನೇ ಮೇಳದ ಉದ್ಘಾಟನೆ ದಿನಾಂಕ 16 ನವೆಂಬರ್ 2025ರಂದು ಜರಗಿತು. ಈ ಸಂದರ್ಭದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಘನ ಅಧ್ಯಕ್ಷತೆ ಹಾಗು ಅತಿಥಿ ಗಣ್ಯರ ಸಮಕ್ಷ ದೇವಳದ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ, ಏಳು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಅನುವಂಶಿಕ ಮೊಕ್ತೇಸರುಗಳಾದ ವಾಸುದೇವ ಅಸ್ರಣ್ಣ ಮತ್ತು ಸಹೋದರರು ಕಲೆ- ಕಲಾವಿದರು ಮತ್ತು ಸಾಮಾಜಿಕ ಕಳಕಳಿಯ ಕೈಂಕರ್ಯ ಮಾಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ‘ಶ್ರೀ ದುರ್ಗಾನುಗ್ರಹ ಪ್ರಶಸ್ತಿ’ ನೀಡಿ ಗೌರವಿಸಿದರು.
ಶ್ರೀದೇವಿಯ ಪ್ರಸಾದ, ಸನ್ಮಾನ ಪತ್ರ ಹಾಗೂ ರೂ.25,000/-ದ ಹಮ್ಮಿಣಿಯನ್ನು ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಇವರಿಗೆ ನೀಡಿ ಅಭಿನಂದಿಸಿದರು. ಕಲಾವಿದ ಶ್ರುತಕೀರ್ತಿರಾಜ್ ಸಂಸ್ಥೆಯ ಕಾರ್ಯಚಟುವಟಿಕೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್.ವಿ. ಭಟ್, ಪಿ. ಕಿಶನ್ ಹೆಗ್ಡೆ, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್, ಸದಸ್ಯರಾದ ಎಸ್. ಗಣರಾಜ ಭಟ್, ಸಂತೋಷ ಕುಮಾರ ಶೆಟ್ಟಿ, ಕಿಶೋರ ಸಿ. ಉದ್ಯಾವರ, ಡಾ. ಪೃಥ್ವಿರಾಜ ಕವತ್ತಾರು, ಎಚ್.ಎನ್. ವೆಂಕಟೇಶ ಉಪಸ್ಥಿತರಿದ್ದರು. ಕಳೆದ ಐದು ದಶಕಗಳಿಂದ ಮೌನವಾಗಿ ಕಾರ್ಯನಿರ್ವಹಿಸುತ್ತಾ ಬಂದ ಸಂಸ್ಥೆಗೆ, ಯಕ್ಷಗಾನ ಪ್ರಿಯೆ ಕಟೀಲು ದುರ್ಗಾಮಾತೆಯ ಸಮ್ಮುಖದಲ್ಲಿ ದೊರೆತ ಅನುಗ್ರಹ ಪೂರ್ವಕ ಪ್ರಸಾದ ಕಾರ್ಯಕರ್ತರಿಗೆ ಧನ್ಯತೆ ನೀಡಿತು.
