ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ರಥಬೀದಿ ಗೆಳೆಯರು (ರಿ.) ಉಡುಪಿ ಇವರ ಸಹಯೋಗದೊಂದಿಗೆ ‘ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 9-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9-30 ಗಂಟೆಗೆ ಈ ಕಾರ್ಯಕ್ರಮವನ್ನು ಮೈಸೂರಿನ ಡಾ. ಜನಾರ್ದನ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ 11-00 ಗಂಟೆಗೆ ನಡೆಯುವ ವಿಚಾರ ಗೋಷ್ಠಿ 1ರಲ್ಲಿ ‘ರಂಗಪ್ರಯೋಗಗಳಲ್ಲಿ ವಸ್ತು, ಆಶಯ ಮತ್ತು ವಿನ್ಯಾಸಗಳಲ್ಲಿ ಸಮಕಾಲೀನತೆ’ ಎಂಬ ವಿಷಯದ ಬಗ್ಗೆ ಶರಣ್ಯಾ ರಾಮ್ ಪ್ರಕಾಶ್ ಬೆಂಗಳೂರು, ಮಹಾದೇವ ಹಡಪದ ಧಾರವಾಡ ಮತ್ತು ಪ್ರಸನ್ನ ಡಿ. ಶಿವಮೊಗ್ಗ ಇವರು ವಿಚಾರ ಮಂಡನೆ ಮಾಡಲಿದ್ದು, ಅಭಿನವ್ ಗ್ರೋವರ್, ಕ್ರಿಸ್ಟೋಫರ್ ಡಿಸೋಜ, ರೋಹಿತ್ ಎಸ್. ಬೈಕಾಡಿ, ಬಿಂದು ರಕ್ಷಿದಿ, ಪ್ರಶಾಂತ್ ಉದ್ಯಾವರ್ ಇವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಅಪರಾಹ್ನ 2-00 ಗಂಟೆಗೆ ನಡೆಯುವ ವಿಚಾರ ಗೋಷ್ಠಿ 2ರಲ್ಲಿ ‘ಹವ್ಯಾಸಿ ರಂಗಭೂಮಿಯ ಸ್ವಾಯತ್ತತೆಯ ಪ್ರಶ್ನೆಗಳು ಮತ್ತು ಶಿಥಿಲೀಕರಣದ ಅಪಾಯಗಳು’ ಎಂಬ ವಿಷಯದ ಬಗ್ಗೆ ಪ್ರಸಾದ್ ರಕ್ಷಿದಿ, ಸಾಸ್ವೆಹಳ್ಳಿ ಸತೀಶ್, ಬಾಸುಮಾ ಕೊಡಗು, ಪ್ರಕಾಶ್ ನರೋನ್ಹ ಪಾಂಬೂರು ಇವರು ವಿಚಾರ ಮಂಡನೆ ಮಾಡಲಿದ್ದಾರೆ.

