ಮಂಗಳೂರು : ಸನಾತನ ನಾಟ್ಯಾಲಯದ ನೃತ್ಯ ಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆ ನಾಟ್ಯ ವಿದುಷಿ ಕುಮಾರಿ ಅಮೃತಾ ವಿ. ಇವರ ಭರತನಾಟ್ಯ ರಂಗ ಪ್ರವೇಶವು ದಿನಾಂಕ 22 ನವೆಂಬರ್ 2025ರ ಶನಿವಾರ ಸಂಜೆ ಗಂಟೆ 5-30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ನಾಟ್ಯಾಚಾರ್ಯ ಉಳ್ಳಾಲ್ ಮೋಹನ್ ಕುಮಾರ್ ದೀಪ ಬೆಳಗಿಸಿ ಉದ್ಗಾಟಿಸುವ ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ಮತ್ತು ಹಿರಿಯ ನೃತ್ಯ ಗುರು ಹಾಗೂ ವಿಮರ್ಶಕಿ ವಿದುಷಿ ಪ್ರತಿಭಾ ಎಂ.ಎಲ್. ಸಾಮಗ ಭಾಗವಹಿಸಲಿದ್ದಾರೆ.

ಶ್ರೀಯುತ ವಾಸುದೇವ್ ಪಿ. ಮತ್ತು ಶ್ರೀಮತಿ ರೂಪ ವಾಸುದೇವ್ ಇವರ ಪುತ್ರಿ ಅಮೃತ ಬಿ.ಇ. ಪದವೀಧರೆಯಾಗಿದ್ದು, ಭರತನಾಟ್ಯದ ವಿದ್ವತ್ ಪರೀಕ್ಷೆಯನ್ನು ಅತ್ಯುನ್ನತ ಅಂಕ ದೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಅನೇಕ ಪ್ರಮುಖ ವೇದಿಕೆಗಳಲ್ಲಿ ಏಕಾರ್ಥ ನೃತ್ಯ ಪ್ರದರ್ಶನ ನೀಡಿರುವ ಅಮೃತ ತನ್ನ ಗುರುಗಳೊಂದಿಗೆ ರಾಜ್ಯ ಮತ್ತು ರಾಷ್ಟ್ರದಾದ್ಯಂತ ನೃತ್ಯ ಕಾರ್ಯಕ್ರಮ ನೀಡಿರುತ್ತಾಳೆ. ಬೆಂಗಳೂರು ದೂರದರ್ಶನದ ಬಿ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುವ ಇವರು ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ನಡೆಸಿದಂತಹ ಸಿತಾರ್ ವಾದನ ಪರೀಕ್ಷೆಯಲ್ಲಿ ವಿಶಾರದ ಪೂರ್ಣ ಹಂತವನ್ನು ಪೂರೈಸಿದ್ದು ಆಕಾಶವಾಣಿಯ ಯುವ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ತೇರ್ಗಡೆ ಹೊಂದಿರುತ್ತಾರೆ.

ನೃತ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ಹಾಡುಗಾರಿಕೆ ವಿದ್ವಾನ್ ಕಾರ್ತಿಕ್ ಹೆಬ್ಬಾರ್ ಬೆಂಗಳೂರು, ಮೃದಂಗ ವಾದನ ವಿದ್ವಾನ್ ಹರ್ಷ ಸಾಮಗ ಬೆಂಗಳೂರು, ಕೊಳಲುವಾದನ ವಿದ್ವಾನ್ ಕೆ. ಮುರಳೀದರ್ ಉಡುಪಿ ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳಿಗೆ ಹಾರ್ದಿಕ ಸ್ವಾಗತ ಕೋರಲಾಗಿದೆ.

