ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಆಯೋಜಿಸುತ್ತಿರುವ ‘ಕಲಾಭವ’ ಮಾಸಿಕ ನೃತ್ಯ ಸರಣಿ-04ರ ಕಾರ್ಯಕ್ರಮವು ದಿನಾಂಕ 09 ನವೆಂಬರ್ 2025ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಕಲಾಸೂರ್ಯ ನೃತ್ಯಾಲಯದ ನೃತ್ಯಗುರು ವಿದುಷಿ ಶ್ರೀಮತಿ ಸೌಜನ್ಯ ವಿ. ಪಡುವೆಟ್ನಾಯ ಇವರ ಶಿಷ್ಯೆ ಕುಮಾರಿ ಸುಹಾನಿ ಭಂಡಾರಿ ಇವರ ಮೊದಲ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಿ ಕಲಾಸಕ್ತರ ಮನಸೂರೆಗೊಂಡಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ. ನಿರೀಕ್ಷಾ ಶೆಟ್ಟಿ ಇವರು “ಇಂದಿನ ಯುವ ಪೀಳಿಗೆ ತಮ್ಮ ಕಲಿಕೆಯ ಜೊತೆಗೆ ಇಂತಹ ಕಲೆಗಳ ಮೇಲೆ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಎಲ್ಲವನ್ನು ಒಟ್ಟಾಗಿ ಸಮದೂಗಿಸಲು ಕಲಿಯಬೇಕು” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.


ಕುಮಾರಿ ಶ್ರೇಯ ಭಾಪಟ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮಾಸ್ಟರ್ ಶ್ಯಾಮ್ ಪಡುವೆಟ್ನಾಯ ಇವರ ಓಂಕಾರನಾದ, ಸೌಜನ್ಯ ಪಡುವೆಟ್ನಾಯ ಇವರ ಶಂಖನಾದ, ಕುಮಾರಿ ಸ್ಮಿತಾ ಇವರ ಪಂಚಾಂಗ ಪಠಣ, ಕುಮಾರಿ ದಶ್ಮಿತ ಇವರಿಂದ ಭರತನಾಟ್ಯದಲ್ಲಿ ಮಾರ್ಗ ಪದ್ಧತಿ ವಿಷಯ ಮಂಡನೆ ಹೆಚ್ಚಿನ ಮೆರುಗು ನೀಡಿತು.

ಹಿಮ್ಮೇಳದಲ್ಲಿ ಗುರು ವಿದ್ವಾನ್ ದೀಪಕ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವಿದುಷಿ ಸೌಜನ್ಯ ಪಡುವೆಟ್ನಾಯ ನಟುವಾಂಗದಲ್ಲಿ, ವಿದುಷಿ ಶ್ರೀಮತಿ ಪ್ರೀತಿಕಲಾ ಹಾಡುಗಾರಿಕೆಯಲ್ಲಿ, ವಿದ್ವಾನ್ ವಿ. ಮನೋಹರ್ ರಾವ್ ಮೃದಂಗದಲ್ಲಿ, ಕುಮಾರಿ ಮೇಧಾ ಉಡುಪ ಕೊಳಲಿನಲ್ಲಿ ಸಹಕರಿಸಿದರು. ಕಲಾವಿದೆಯ ತಾಯಿ ಶ್ರೀಮತಿ ಸತ್ಯಶೀಲಾ ಸ್ವಾಗತಿಸಿ, ಸಂಚಾಲಕರಾದ ವಿಕ್ರಮ್ ಪಡುವೆಟ್ನಾಯ ವಂದಿಸಿ, ಕುಮಾರಿ ಶ್ರೀಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

