ಪ್ರೊ. ಎಚ್.ಎಂ. ಶಂಕರನಾರಾಯಣ ರಾವ್ ಇವರು ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಪ್ರಕಾಶಕರಾಗಿ, ಪ್ರಾಧ್ಯಾಪಕರಾಗಿ ಅಪೂರ್ವ ಸೇವೆ ಸಲ್ಲಿಸಿದ ಖ್ಯಾತರು. ‘ಕನ್ನಡ ಕವಿಕಾವ್ಯ ಮಾಲೆ’ ಅಥವಾ ‘ಶಾರದಾ ಮಂದಿರ ಪ್ರಕಾಶನ’ ಸಂಸ್ಥೆಯನ್ನು ಸ್ಥಾಪಿಸಿ, ಪುಸ್ತಕ ಪ್ರಕಟಣೆ ಎಂಬ ವಿಚಾರವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲದ ಸಮಯದಲ್ಲಿ 400ಕ್ಕೂ ಹೆಚ್ಚು ಪ್ರಸಿದ್ಧ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿದ ಧೀಮಂತರು.
ದಾವಣಗೆರೆಯ ಜಿಲ್ಲೆಯ ಹರಿಹರೇಶ್ವರ ದೇವಾಲಯದ ಅರ್ಚಕರಾದ ಮಲ್ಲಾರಿ ಭಟ್ಟ ಮತ್ತು ಭೀಮಕ್ಕ ದಂಪತಿಗಳ ಸುಪುತ್ರರಾಗಿ 21 ನವಂಬರ್ 1913ರಂದು ದಾವಣಗೆರೆಯಲ್ಲಿ ಜನಿಸಿದರು. ಕೊಟ್ಟೂರಿನಲ್ಲಿ ಪ್ರೌಢ ಶಿಕ್ಷಣದವರೆಗಿನ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ಉನ್ನತ ಶಿಕ್ಷಣಕ್ಕೆ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು. ಪ್ರೊ. ಟಿ.ಎಸ್. ವೆಂಕಣ್ಣಯ್ಯ, ಡಾಕ್ಟರ್ ಶ್ರೀಕಂಠ ಶಾಸ್ತ್ರಿ, ತೀ.ನಂ.ಶ್ರೀ., ಡಿ.ಎಲ್.ಎನ್. ಮುಂತಾದವರು ಇವರ ಗುರುಗಳಾಗಿದ್ದರು. ಆರ್ಥಿಕವಾಗಿ ಕಷ್ಟದಲ್ಲಿದ್ದ ಶಂಕರನಾರಾಯಣರಿಗೆ ಇವರೆಲ್ಲರ ಕೃಪೆಯಿಂದ ಊಟ ಮತ್ತು ವಸತಿಯ ಸಮಸ್ಯೆ ಬಗ್ಗೆ ಹರಿಯಿತು. ಎಂ.ಎ. ಪದವೀಧರರಾದ ಮೇಲೆ ಶಂಕರನಾರಾಯಣ ರಾಯರು ಮೈಸೂರಿನ ಬನುಮಯ್ಯ ಹೈಸ್ಕೂಲ್ನಲ್ಲಿ ಶಿಕ್ಷಕ ವೃತ್ತಿಗೆ ಸೇರಿದರು. 1945ರಲ್ಲಿ ಶಾರದಾ ವಿಲಾಸ ಕಾಲೇಜು ಆರಂಭವಾಯಿತು. ಅಲ್ಲಿಗೆ ಪೂರ್ಣಕಾಲಿಕ ಉಪನ್ಯಾಸಕರಾಗಿ ಇವರು ಆಯ್ಕೆಗೊಂಡರು. ಮುಂದೆ ಅಲ್ಲಿಯೇ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ 1975ರಲ್ಲಿ ನಿವೃತ್ತರಾದರು.
1933ರಲ್ಲಿ ಬಿ.ಎಂ. ಶ್ರೀಕಂಠಯ್ಯನವರ ಅಧ್ಯಕ್ಷತೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆಯ ಬಗ್ಗೆ ಶಂಕರನಾರಾಯಣರಿಗೆ ತಿಳಿಯಿತು. ಅಲ್ಲಿಂದ ತಾವು ಪುಸ್ತಕ ಬರೆಯಬೇಕೆಂಬ ಅತೀವ ಬಯಕೆಯಿಂದ ಅವರ ಪ್ರಿಯ ಕವಿಯಾದ ರಾಘವಾಂಕನನ್ನು ಕುರಿತು ಒಂದು ಪುಟ್ಟ ಕೃತಿಯನ್ನು ರಚಿಸಿದರು. ತಮ್ಮ ರಚನೆಯನ್ನು ಪ್ರಕಟಿಸುವವರು ಯಾರು ? ಎಂಬ ಪ್ರಶ್ನೆ ಉದ್ಭವವಾದಾಗ ತಾವೇ ಪ್ರಕಾಶಕರಾದರು. ತದನಂತರದಲ್ಲಿ ಪ್ರಸಿದ್ಧ ಲೇಖಕರಲ್ಲಿ “ನನಗೊಂದು ಪುಸ್ತಕ ಕೊಡಿ ಪ್ರಕಟಿಸುತ್ತೇನೆ” ಎಂದು ತಾವೇ ಮನವಿ ಮಾಡಿಕೊಳ್ಳತೊಡಗಿದರು. ಕಾಲಕ್ರಮೇಣ “ನನ್ನದೊಂದು ಪುಸ್ತಕ ಪ್ರಕಟಿಸಿ” ಎಂದು ಸಾಹಿತಿಗಳು ಕೇಳುವ ಮಟ್ಟಕ್ಕೆ ಶಂಕರನಾರಾಯಣರು ತಲುಪಿದರು. ಪ್ರಾಚೀನ ಕಾವ್ಯಗಳ ಪ್ರಕಟಣೆ, ಸಂಸ್ಕೃತದ ಎಲ್ಲಾ ಅಲಂಕಾರ ಕೃತಿಗಳನ್ನು ಅರ್ಥ ಟಿಪ್ಪಣಿಗಳೊಂದಿಗೆ ಕನ್ನಡದಲ್ಲಿ ಪ್ರಕಟಿಸುವುದು ಮತ್ತು ವಾಚಕರಲ್ಲಿ ಅಭಿರುಚಿ ಬೆಳೆಸುವಂತಹ ಗ್ರಂಥಗಳನ್ನು ಕಡಿಮೆ ಬೆಲೆಗೆ ನೀಡುವುದು ಕವಿಕಾವ್ಯ ಮಾಲೆಯ ಉದ್ದೇಶವಾಗಿತ್ತು. ಆ ಕಾಲಘಟ್ಟದ ಪ್ರಸಿದ್ಧ ಲೇಖಕರಾದ ಎ.ಆರ್. ಕೃಷ್ಣಶಾಸ್ತ್ರಿ, ಎ.ಎನ್. ಮೂರ್ತಿರಾವ್, ಆರ್.ಸಿ. ಹಿರೇಮಠ, ಗೂರೂರು ರಾಮಸ್ವಾಮಿ ಅಯ್ಯಂಗಾರ್, ಪು.ತಿ.ನ., ತ.ರಾ.ಸು. ಮುಂತಾದವರ ಕೃತಿಗಳನ್ನು ಶಾರದಾ ಮಂದಿರದಿಂದ ಲೋಕಾರ್ಪಣೆಗೊಳಿಸಿದರು.
“ಪ್ರಕಟಣಾ ಶಾಸ್ತ್ರದಲ್ಲಿ ಪರಿಣಿತರಾದ ನಿಮಗೆ ನಾನು ಶಭಾಷ್ ಗಿರಿಯನ್ನು ಕೊಡಬೇಕಾಗಿಲ್ಲ. ಒಟ್ಟು ಕನ್ನಡ ನಾಡೇ ನಿಮ್ಮನ್ನು ಹೊಗಳುತ್ತದೆ. ವಿದ್ವಜನರಿಗೆ ನಿಮ್ಮ ಸಾಹಸವನ್ನು ಕಂಡು ರೋಮಾಂಚನವಾಗುತ್ತಿದೆ” ಎಂದು ಶಂಕರನಾರಾಯಣ ರಾವ್ ರವರ ಪ್ರಕಟಣಾ ಕಾರ್ಯವೈಖರಿಯನ್ನು ಕಂಡು ಜಿ. ವೆಂಕಟಸುಬ್ಬಯ್ಯನವರು ಮೆಚ್ಚುಗೆಯ ಮಾತುಗಳನ್ನಾಡಿದ್ದರು. “ಪುಸ್ತಕಗಳ ಮಾರಾಟಕ್ಕಾಗಿ ಕಾಯದೆ ಲೇಖಕರ ಹಣವನ್ನು ಮೊದಲೇ ಕೊಡುವ ಪ್ರಾಮಾಣಿಕತನವನ್ನು ಸ್ಮರಿಸಿಕೊಳ್ಳಲೇಬೇಕು” ಎಂದು ಪ್ರೊ. ಕೆ. ವೆಂಕಟರಾಮಪ್ಪ ಸ್ನೇಹ ಸೌಜನ್ಯದಿಂದ ಹೇಳಿದರೆ “ಸಮಯಕ್ಕೆ ಸರಿಯಾಗಿ ಲೇಖನ ಗೌರವ ಧನ ತಲುಪುತ್ತಿದೆ” ಎಂದು ಶ್ರೀರಂಗರು ಬಿಚ್ಚು ಮನಸ್ಸಿನ ಮಾತುಗಳನ್ನು ಆಡಿದ್ದರು. ಇವರ ಪ್ರಕಾಶನ ಸಂಸ್ಥೆಯಿಂದ ಪ್ರಕಟಗೊಂಡ ಹಲವಾರು ಗ್ರಂಥಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಸೋವಿಯತ್ ಲ್ಯಾಂಡ್ ಪ್ರಶಸ್ತಿಗಳನ್ನು ಗಳಿಸಿದ್ದವು ಎಂಬುದು ಹೆಮ್ಮ ಪಡುವ ವಿಚಾರ. ಶಂಕರನಾರಾಯಣರು ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಮೂಲಕ ಕೃತಿಕಾರರಿಗೆ ಸಹಕಾರ ನೀಡಿದ್ದು ಮಾತ್ರವಲ್ಲದೆ ಸುಮಾರು 25ಕ್ಕೂ ಹೆಚ್ಚು ಕೃತಿಗಳನ್ನು ತಾವೇ ರಚಿಸಿದ್ದರು. ಅವುಗಳಲ್ಲಿ ಹರಿಹರ ದೇವಾಲಯಕ್ಕೆ ಸಂಬಂಧಪಟ್ಟಂತೆ ರಚಿಸಿದ ಸಂಶೋಧನಾತ್ಮಕ ಕೃತಿ ವಿದ್ವಜನರ ಗಮನ ಸೆಳೆದಿದೆ. ‘ಮೃಚ್ಛಕಟಿಕ ಪ್ರಕರಣ’, ‘ಅಲ್ಲಾ ಉದ್ದಿನ್ ಮತ್ತು ಅದ್ಭುತ ದೀಪ’, ‘ಹರಿಹರ ದೇವಾಲಯ’, ‘ಮಧ್ಯಮ ವ್ಯಾಯಾಮ’ ಇತ್ಯಾದಿ ಕೃತಿಗಳು ಈ 25 ಕೃತಿಗಳಲ್ಲಿ ಸೇರಿದವುಗಳು.
ಪ್ರಕಾಶಕರಾಗಿ ಪುಸ್ತಕ ಪ್ರಕಟಣೆ ಮಾಡಿ, ಬರಹಗಾರರಾಗಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿ ಅಪೂರ್ವ ಸೇವೆ ಸಲ್ಲಿಸಿದ ಶಂಕರನಾರಾಯಣ ರಾವ್ 17 ಸಪ್ಟಂಬರ್ 1997ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು. “ಶಂಕರನಾರಾಯಣ ರಾವ್ ಈಗ ಕನ್ನಡ ಸಾಹಿತ್ಯ ಚರಿತ್ರೆಯ ಒಂದು ಭಾಗವಾಗಿದ್ದಾರೆ. ಆದರೆ ಅವರು ನಿರ್ಮಿಸಿದ ಶಾರದಾ ಮಂದಿರದಲ್ಲಿ ಅವರು ಬೆಳಗಿದ ಹಣತೆಗಳು ಜ್ಞಾನಪಿಪಾಸುಗಳಿಗೆ ಎಂದೆಂದಿಗೂ ದಾರಿದೀಪ” ಎಂದು ಈ ಸಂದರ್ಭದಲ್ಲಿ ಅನೇಕ ಕನ್ನಡದ ಪತ್ರಿಕೆಗಳು ಶಂಕರನಾರಾಯಣ್ ಅವರ ಪ್ರಾಮಾಣಿಕ ಪ್ರಯತ್ನವನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದವು. 2009ರಲ್ಲಿ ಪ್ರೊ. ಎಚ್.ಎಂ. ಶಂಕರನಾರಾಯಣರ ಸ್ಮರಣೆಗಾಗಿ ‘ಶಂಕರ ಸ್ಮೃತಿ’ ಎಂಬ ಕೃತಿಯು ಪ್ರಕಟಗೊಂಡಿತು. ಇವರು ಮಾಡಿದ ಸೇವೆಯನ್ನು ಅವರ ಜನ್ಮದಿನವಾದ ಇಂದು ಸ್ಮರಿಸೋಣ.
– ಅಕ್ಷರೀ
