ಸಾಲಿಗ್ರಾಮ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಚಿಣ್ಣರ ತಂಡದವರಿಂದ ‘ದ್ರೌಪದಿ ಪ್ರತಾಪ’ ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನವು ವಾರ್ಷಿಕ ದೀಪೋತ್ಸವದ ಸಂದರ್ಭದಲ್ಲಿ ದಿನಾಂಕ 19 ನವೆಂಬರ್ 2025ರಂದು ಸಾಲಿಗ್ರಾಮ ಗುರುನರಸಿಂಹ ಬಯಲು ರಂಗ ಮಂಟಪದಲ್ಲಿ ನಡೆಯಿತು.
ಗುರು ನರಸಿಂಹ ದೇವಳದ ಅಧ್ಯಕ್ಷ, ಮನೋವೈದ್ಯಕೀಯ ತಜ್ಞ ಡಾ. ಕೆ.ಎಸ್. ಕಾರಂತರು ಚಿಣ್ಣರನ್ನುದ್ದೇಶಿಸಿ ಮಾತನಾಡಿ “ಚಿಣ್ಣರ ವೇಷಭೂಷಣ, ಕುಣಿತ, ಸಂಭಾಷಣೆ, ಹಾವ ಭಾವಗಳು ಪ್ರೇಕ್ಷಕರ ಮನಸೂರೆಗೊಂಡದ್ದನ್ನು ಗಮನಿಸಿದ್ದೇನೆ. ಬದುಕೆಂಬ ರಂಗಸ್ಥಳದಲ್ಲಿ ಭವಿಷ್ಯದ ಬೇರೆ ಬೇರೆ ಕಾರ್ಯಭಾರವನ್ನು ವಹಿಸಿಕೊಳ್ಳಲಿರುವ ಇವತ್ತಿನ ಪುಟಾಣಿ ವೇಷಧಾರಿಗಳು ಇಂದು ಕಟ್ಟಿಕೊಂಡಿರುವ ಗೆಜ್ಜೆ, ಹಾಕಿದ ಹೆಜ್ಜೆಗಳು ಲಯಬದ್ಧ ಭವಿಷ್ಯಕ್ಕೆ ಭದ್ರ ಬುನಾದಿಯಾಗುವಂತೆ ಶ್ರೀ ಮದ್ಯೋಗಾನಂದ ಗುರು ನರಸಿಂಹನು ಅನುಗ್ರಹಿಸಲಿ” ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ತಂಡದ ಕಾರ್ಯದರ್ಶಿ ವೆಂಕಟೇಶ ವೈದ್ಯ ಇವರನ್ನು ಗೌರವಿಸಲಾಯಿತು. ವೇಷಧಾರಿಯಾದ ಪೂಜಾ ಆಚಾರ್ ತೆಕ್ಕಟ್ಟೆ, ಪರಿಣಿತ ವೈದ್ಯ, ರಚಿತ್ ಶೆಟ್ಟಿ, ಮನೋಮಯ್ ಕಾರಂತ್, ಸನ್ನಿಧಿ ಹೊಳ್ಳ ಉಪಸ್ಥಿತರಿದ್ದರು.
