ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕುವರೆ ದಶಕಗಳಿಂದ ಗುಣಾತ್ಮಕ ಯಕ್ಷಗಾನ ಪ್ರದರ್ಶನ, ಯಕ್ಷಗಾನ ತರಬೇತಿ, ಕಮ್ಮಟ, ಪುಸ್ತಕ ಬಿಡುಗಡೆ, ಯಕ್ಷಗಾನ ಉತ್ಸವ, ಯಕ್ಷಗಾನ ಪ್ರಾತ್ಯಕ್ಷಿಕೆ ಹೀಗೆ ಹಲವು ಚಟುವಟಿಕೆಯಿಂದಿರುವ ಯಕ್ಷದೇಗುಲ ಸಂಸ್ಥೆಯು ನಾಡಿನಾದ್ಯಂತ ಪ್ರದರ್ಶನ ನೀಡಿರುವುದಲ್ಲದೇ ಜಮ್ಮು-ಕಾಶ್ಮೀರ ಹೊರತು ಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಪ್ರದರ್ಶನಗಳನ್ನು ನೀಡಿದೆ. ಅಮೇರಿಕ ಮತ್ತು ಲಂಡನ್‌ನಲ್ಲಿಯೂ ಹಲವು ಪ್ರದರ್ಶನ ನೀಡಿದಲ್ಲದೆ ಇತ್ತೀಚೆಗೆ ಸಿಂಗಾಪುರ ಮತ್ತು ಮೊದಲ ಬಾರಿಗೆ ಇಸ್ರೇಲ್‌ನಲ್ಲೂ ಯಕ್ಷಗಾನದ ಕಂಪನ್ನು ಹರಿಸಿದೆ. ಯಕ್ಷದೇಗುಲವು ಪ್ರತಿ ವರ್ಷವೂ ಸಾಧಕ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವ ಯಕ್ಷದೇಗುಲ ಸಂಸ್ಥೆಯು ಈವರೆಗೆ 38 ಕಲಾವಿದರನ್ನು ಗೌರವಿಸಿದೆ. ಪ್ರಸ್ತುತ ವರ್ಷ ಸಂಸ್ಥೆಯು ಕಳೆದ ಐವತ್ತು ವರ್ಷಗಳಿಂದ ಯಕ್ಷ ಗುರುಗಳಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಸರು ಮಾಡಿದ, ಯಕ್ಷ ಕಲೆಯ ಕುರಿತಾದ ಸಮಗ್ರ ಜ್ಞಾನವನ್ನು ಹೊಂದಿದ, ಅನೇಕ ವಿಚಾರ ಸಂಕಿರಣ, ಕಮ್ಮಟಗಳಲ್ಲಿ ಭಾಗವಹಿಸುವ ಮೂಲಕ ಯಕ್ಷ ಕಲೆಯ ಸಮರ್ಥ ವಿದ್ವಾಂಸರಾಗಿದ್ದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳರನ್ನು ‘ಯಕ್ಷದೇಗುಲ 2025’ರ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ. ದಿನಾಂಕ 25 ಡಿಸೆಂಬರ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್‌ರು ತಿಳಿಸಿದ್ದಾರೆ.
