ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ವತಿಯಿಂದ ಪರಿಷತ್ತಿನ ಸಾಧಕರಿಗೆ ಸನ್ಮಾನ ಸಮಾರಂಭವು ಮಂಗಳೂರಿನ ವುಡ್ ಲ್ಯಾಂಡ್ಸ್ ಹೊಟೇಲಿನಲ್ಲಿ ದಿನಾಂಕ 21 ನವೆಂಬರ್ 2025ರಂದು ಜರಗಿತು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದು, ಇತ್ತೀಚೆಗೆ ‘ವಿಶುಕುಮಾರ ಪ್ರಶಸ್ತಿ’ಗೆ ಭಾಜನರಾದ ಶ್ರೀ ಬೆನೆಟ್ ಅಮ್ಮನ್ನ, ಮುಂಬಯಿ ಮಹಿಳೆಯರ ಬಗ್ಗೆ ಪುಸ್ತಕ ಬರೆದು ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸಾಹಿತಿ ಶ್ರೀಮತಿ ಸುಖಲಾಕ್ಷಿ ವೈ. ಸುವರ್ಣ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಹಲವು ಪ್ರಶಸ್ತಿ ಪುರಸ್ಕೃತರೂ, ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯತನದ ಅಭಿಯಾನದಲ್ಲಿ ನೂರಕ್ಕಿಂತಲೂ ಅಧಿಕ ಸದಸ್ಯರನ್ನು ನೋಂದಣಿ ಮಾಡಿಸಿ ಜನಜನಿತರೂ ಆದ ಶ್ರೀ ಇಸ್ಮಾಯಿಲ್ ಬಬ್ಬುಕಟ್ಟೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅರೆಹೊಳೆ ಸದಾಶಿವರಾಯರು ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತಾ, “ಪರಿಷತ್ತಿನ ಒಳಗಿನ ಸಾಧಕರನ್ನೇ ಗುರುತಿಸಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಂಭ್ರಮಾಚರಣೆ ಮನೆಯೊಳಗಿನಿಂದಲೇ ಆದರೆ ಅದು ಹೆಚ್ಚು ಆಪ್ತವೂ ಅರ್ಥಪೂರ್ಣವೂ ಆಗುತ್ತದೆ. ಮತ್ತಷ್ಟು ಸಾಧಿಸಲು ಪ್ರೇರಣೆಯಾಗುತ್ತದೆ” ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ರೇವಣಕರರು ಸಾಧಕರನ್ನು ಅಭಿನಂದಿಸಿದರು. ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಆ. ಮುರಲೀಮೋಹನ ಚೂಂತಾರರು ಸನ್ಮಾನಿತರನ್ನು ಪರಿಚಯಿಸಿದರು. ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ ಪ್ರಸಾದ ಜೀಯವರು ಸ್ವಾಗತಿಸಿ, ಕೋಶಾಧಿಕಾರಿಗಳಾದ ಶ್ರೀ ಸುಬ್ರಾಯ ಭಟ್ಟರು ನಿರೂಪಿಸಿದರು. ಶ್ರೀಮತಿ ಉಷಾ ಜೀಯವರು ಪ್ರಾರ್ಥಿಸಿದರು. ಪರಿಷತ್ತಿನ ಸದಸ್ಯರಾದ ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಕೃಷ್ಣಪ್ಪ ಗೌಡ, ತಿರುಮಲೇಶ್ವರ ಭಟ್, ನಿಜಗುಣ ದೊಡ್ಡಮನಿ, ಮುರಳೀಧರ ಭಾರದ್ವಾಜ್ ಮತ್ತು ಸಾಹಿತಿ ಚಂದ್ರಶೇಖರ ದೈತೋಟ, ವಿಘ್ನೇಶ್ ಭಿಡೆ, ರವೀಂದ್ರನಾಥ ಕೆ.ವಿ., ಅರುಣ್ ಮಾನ್ವಿ, ಸುಮಾಮಾನ್ವಿ, ಅನಿತಾ ಶೆಣೈ, ಆಕೃತಿ ಭಟ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
