ಮಂಗಳೂರು : ಮಂಗಳೂರಿನ ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವದ ಅಂಗವಾಗಿ ದಿನಾಂಕ 22 ಮತ್ತು 23 ನವೆಂಬರ್ 2025ರಂದು ಎರಡು ದಿನಗಳ ಸಂಗೀತ ಮಹೋತ್ಸವ ‘ದಶಕ ಸಮರ್ಪಣಂ’ ಕಾರ್ಯಕ್ರಮವು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ್ ಕಟೀಲ್ “ಆಧುನಿಕ ಜಗತ್ತಿನ ಜಂಜಾಟದಲ್ಲಿ ಎಲ್ಲರೂ ಒತ್ತಡದಿಂದಲೇ ಬದುಕುತ್ತಿದ್ದಾರೆ. ಒತ್ತಡ ನಿವಾರಣೆಗಾಗಿ ಅನೇಕ ರೀತಿಯ ಔಷಧ, ಕೌನ್ಸೆಲಿಂಗ್ ಮೊರೆ ಹೋಗುತ್ತಾರೆ. ಆದರೆ ಒಂದಷ್ಟು ಹೊತ್ತು ಸಂಗೀತ ಕೇಳಿದರೆ ತಂನಿಂತಾನೆ ಒತ್ತಡ ನಿವಾರಣೆಯಾಗಲಿದೆ. ಒತ್ತಡ ನಿವಾರಣೆಗೆ ಸಂಗೀತವೇ ಉತ್ತಮ ಕೌನ್ಸೆಲಿಂಗ್. ಡಾ. ಆನಿಶ್ ವಿ. ಭಟ್ ರವರು ಸ್ಥಾಪಿಸಿದ ಮಂಗಳೂರಿನ ಆರೋಹಣಂ ಸಂಗೀತ ಶಾಲೆಯು ಇಂದು ಹತ್ತು ವರ್ಷಗಳನ್ನು ಪೂರೈಸಿದೆ. ಈ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ. ಅಲ್ಲದೆ ಹತ್ತಾರು ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಸಂಗೀತ ಪ್ರೇಮಿಗಳಿಗೂ ಸಂಗೀತ ಕೇಳುವ ಅವಕಾಶವನ್ನು ಕಲ್ಪಿಸುತ್ತಿದ್ದಾರೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಸಂಸ್ಥೆಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪ್ರಸಿದ್ಧ ಕಲಾವಿದರಾಗಿ ಬೆಳೆದು ಬರಲಿ” ಎಂದು ಶುಭ ಹಾರೈಸಿದರು.
ಸಂಗೀತ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಅವರವರ ಅರ್ಹತೆಗೆ ಅನುಗುಣವಾಗಿ ಹಾಡುವ ಅವಕಾಶ, ಇತರ ಕಲಾವಿದರಿಗೆ ಪಕ್ಕವಾದ್ಯಕ್ಕೆ ವೇದಿಕೆ, 10 ಮಂದಿ ಸಾಧಕರಿಗೆ ನಗದಿನೊಂದಿಗೆ ಸನ್ಮಾನ ಎಲ್ಲವೂ ಅತ್ಯಂತ ವ್ಯವಸ್ಥಿತವಾಗಿಯೂ, ಅರ್ಥಪೂರ್ಣವಾಗಿಯೂ ನಡೆಯಿತು. ಕೊನೆಗೆ ನಡೆದ ಡಾ. ಅನೀಶ್ ವಿ. ಭಟ್ ಅವರ ಗುರುಗಳಾದ ಡಾ. ಸೂರ್ಯಪ್ರಕಾಶ್ ಇವರ ಗಾಯನ ಕಛೇರಿಯು ಸಾಂಪ್ರದಾಯಿಕತೆ ,ವಿದ್ವತ್ ಜೊತೆಗೆ ರಂಜನೀಯವಾಗಿ ಮೂಡಿ ಬಂತು. ಆರೋಹಣ ಸಂಗೀತ ಶಾಲೆಯ ಅಧ್ಯಕ್ಷರಾದ ಬಿ. ಗಣೇಶ್ ನಾಯಕ್, ಉಪಾಧ್ಯಕ್ಷ ಮಂಜುನಾಥ ಭಟ್, ಆರೋಹಣ ಸಂಗೀತ ಶಾಲೆಯ ಗುರುಗಳಾದ ಡಾ. ಅನೀಶ್ ವಿ. ಭಟ್ ಮತ್ತು ಹವ್ಯಶ್ರೀ ಕೆ.ಟಿ., ಬಲೆಕ್ಕಳ ವೆಂಕಟೇಶ್ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
