ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯು ಹಮ್ಮಿಕೊಂಡಿದ್ದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯು ದಿನಾಂಕ 23 ನವೆಂಬರ್ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರಾರಂಭವಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ “ರಂಗಭೂಮಿ ಉಡುಪಿ, ವರ್ಷದಲ್ಲಿ 25ಕ್ಕೂ ಅಧಿಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುವ ಮೂಲಕ ಉಡುಪಿಯ ಇತಿಹಾಸ ಪುಟದಲ್ಲಿ ಭದ್ರವಾದ ಸ್ಥಾನ ಪಡೆದಿರುವುದು ನಾವೆಲ್ಲಾ ಹೆಮ್ಮೆ ಪಡುವ ವಿಚಾರವಾಗಿದೆ. ಇಂದು ರಂಗಭೂಮಿಯತ್ತ ಸಭಿಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ನಮ್ಮ ಮಣ್ಣಿನ ಸೊಗಡಾಗಿರುವ ಯಕ್ಷಗಾನ, ನಾಟಕ ಮೊದಲಾದ ಕಲಾಪ್ರಕಾರಗಳನ್ನು ಸೂರ್ಯಚಂದ್ರರು ಇರುವ ತನಕ ಉಳಿಸಿಕೊಂಡು ಹೋಗಬೇಕಾಗಿದೆ. ಆದರೆ ಇಂದು ಜನರ ಆಸಕ್ತಿಗೆ ತಕ್ಕಂತೆ ನಾಟಕಗಳನ್ನು ಮಾರ್ಪಾಟು ಮಾಡಿಕೊಳ್ಳಬೇಕೋ ಅಥವಾ ನಾಟಕಕ್ಕೆ ಸರಿಯಾಗಿ ಜನರನ್ನು ಕರೆಸುವ ಕೆಲಸ ಮಾಡಬೇಕೋ ಎಂಬ ಗೊಂದಲ ಸಂಘಟಕರನ್ನು ಕಾಡುತ್ತಿದೆ. ಈ ಎಲ್ಲಾ ಸವಾಲುಗಳ ನಡುವೆಯೇ ಛಲ ಬಿಡದೆ ಕಳೆದ 45 ವರ್ಷಗಳಿಂದ ಈ ಕನ್ನಡ ನಾಟಕ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿರುವ ರಂಗಭೂಮಿಯ ಸಾಧನೆ ಅಭಿನಂದನಾರ್ಹ” ಎಂದು ತಿಳಿಸಿದರು.

ರಂಗಭೂಮಿ ಉಡುಪಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, “ರಂಗಭೂಮಿ ಉಡುಪಿ ಮಕ್ಕಳಿಗೆ ರಂಗ ಶಿಕ್ಷಣವನ್ನು 25 ಶಾಲೆಗಳಿಗೆ ನೀಡುತ್ತಿದೆ. ಈ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ಹಂಬಲ ನಮ್ಮದು” ಎಂದರು. ಉದ್ಯಮಿ ಸತ್ಯಾನಂದ ನಾಯಕ್ ಆತ್ರಾಡಿ ಮಾತನಾಡಿ, “ರಂಗಭೂಮಿಯತ್ತ ಸೆಳೆತವಿರುವ ಪ್ರೇಕ್ಷಕರೇ ಹೆಚ್ಚು ಈ ನಾಟಕಗಳತ್ತ ಆಕರ್ಷಿತರಾಗುತ್ತಾರೆ. ಈ ನಾಟಕ ಪ್ರದರ್ಶನಕ್ಕೆ ಗುಣಮಟ್ಟದ ಸಭಿಕರೇ ಬರುತ್ತಿರುವುದನ್ನು ಕಂಡಿದ್ದೇನೆ. ಇದು ರಂಗಭೂಮಿಯ ಹೆಗ್ಗಳಿಕೆ” ಎಂದರು.
ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಉಡುಪಿ ಅಧ್ಯಕ್ಷ ರಂಜನ್ ಕೆ. ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಉಪ ಪ್ರಾಂಶುಪಾಲ ವಿಶ್ವನಾಥ ಪೈ, ರಂಗಭೂಮಿ ಉಡುಪಿಯ ಉಪಾಧ್ಯಕ್ಷರುಗಳಾದ ಭಾಸ್ಕರ್ ರಾವ್ ಕಿದಿಯೂರು ಮತ್ತು ಎನ್. ರಾಜಗೋಪಾಲ್ ಬಲ್ಲಾಳ್, ಕಾರ್ಯದರ್ಶಿ ಶ್ರೀಪಾದ ಹೆಗಡೆ, ವಿವೇಕಾನಂದ ಎನ್., ಕೋಶಾಧಿಕಾರಿ ಯು. ಭೋಜ, ಪೂರ್ಣಿಮಾ ಸುರೇಶ್, ಅಮಿತಾಂಜಲಿ ಕಿರಣ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ತುಮಕೂರಿನ ಗುಬ್ಬಿವೀರಣ್ಣ ಶಿಕ್ಷಣ ಕಲಾತಂಡದಿಂದ ಸ್ಪರ್ಧೆಯ ಮೊದಲ ನಾಟಕ ‘ಗೌತಮ ಬುದ್ಧ’ ಪ್ರದರ್ಶನಗೊಂಡಿತು. ನಾಟಕ ಸ್ಪರ್ಧೆಗಳಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ಉಡುಪಿ ಜಿಲ್ಲೆಯ ನಾಟಕ ತಂಡಗಳು ಭಾಗವಹಿಸುತ್ತಿವೆ.
