ಬಾಳಪ್ಪ ಶೆಟ್ಟಿ ಸ್ವಾಭಿಮಾನಿ ಕಲಾವಿದ: ಕೆ. ಗೋವಿಂದ ಭಟ್
——————————————–
ಮಂಗಳೂರು: ‘ಕರ್ನಾಟಕ ಕಲಾವಿಹಾರ ಹಾಗೂ ಕುಂಡಾವು ಮೇಳಗಳಲ್ಲಿ ತಾನು ಬೆಟ್ಟಂಪಾಡಿ ಬಾಳಪ್ಪ ಶೆಟ್ಟರ ಒಡನಾಡಿಯಾಗಿದ್ದೆ. ಅವರು ಓರ್ವ ಸ್ವಾಭಿಮಾನಿ ಕಲಾವಿದ; ಹಾಸ್ಯ ಪಾತ್ರವನ್ನು ಎಂದೂ ಅಪಹಾಸ್ಯವಾಗಲು ಬಿಡುತ್ತಿರಲಿಲ್ಲ’ ಎಂದು ಯಕ್ಷಗಾನ ರಂಗದ ಹಿರಿಯ ಕಲಾವಿದ ದಶಾವತಾರಿ ಕೆ ಗೋವಿಂದ ಭಟ್ಟರು ಹೇಳಿದ್ದಾರೆ.
ಅವರು ಮಂಗಳೂರು ವಿವಿ ಕಾಲೇಜಿನಲ್ಲಿ ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ, ಮಂಗಳೂರು ವಿವಿಯ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಹಾಗೂ ಕರ್ನಾಟಕ ಯಕ್ಷಭಾರತಿ( ರಿ) ಪುತ್ತೂರು ಇವರ ಸಹಯೋಗದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಹದಿಮೂರನೇ ವರ್ಷದ ನುಡಿಹಬ್ಬ ತ್ರಯೋದಶ ಸರಣಿಯ ದ್ವಿತೀಯ ದಿನ ಯಕ್ಷಗಾನ ಹಾಸ್ಯಪಟು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ಬಾಳಪ್ಪ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಯಕ್ಷಗಾನದ ದುಡಿಮೆಯಿಂದ ಸಂತೃಪ್ತಿ ಇದೆ.ಒಂದು ಸಾವಿರಕ್ಕೂ ಮಿಕ್ಕಿ ಶಿಷ್ಯರು ತನಗಿದ್ದಾರೆ. ವಯೋ ಸಹಜ ತೊಂದರೆಗಳಿಂದ ಅವರನ್ನೆಲ್ಲ ಗುರುತು ಹಿಡಿಯಲು ಕಷ್ಟವಾಗಿದೆ’ ಎಂದು ಗೋವಿಂದ ಭಟ್ ನುಡಿದರು.

ತಾಳಮದ್ದಳೆಗೆ ಪರಂಪರೆ:
ಸಂಸ್ಮರಣಾ ಜ್ಯೋತಿ ಬೆಳಗಿ ಮಾತನಾಡಿದ ಶರವು ಶ್ರೀ ಶರಭೇಶ್ವರ ಮಹಾ ಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳ್ತೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿಗಳು ‘ಯಕ್ಷಗಾನದ ತಾಳಮದ್ದಳೆ ಪ್ರಕಾರಕ್ಕೆ ದೊಡ್ಡ ಪರಂಪರೆ ಇದೆ. ಕಿಲ್ಲೆಯವರು, ಶಾಸ್ತ್ರಿಗಳು, ಶೇಣಿಯವರ
ಜೊತೆ ಸೇರಿ ಕುಬಣೂರು ಬಾಲಕೃಷ್ಣ ರಾಯರು ಶರವು ಕ್ಷೇತ್ರದಲ್ಲಿ ನಡೆಸುತ್ತಿದ್ದ ಕೂಟಗಳಿಗೆ ಈಗ 70 ತುಂಬಿದೆ. ಈ ಪರಂಪರೆಯನ್ನು ಬೆಳೆಸುತ್ತಿರುವ ಯಕ್ಷಾಂಗಣಕ್ಕೆ ಶುಭವಾಗಲಿ’ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಆತ್ಮ ಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ ‘ಯಕ್ಷಗಾನ ಕಲಾವಿದರು ಬಳಸುವ ಸಾಹಿತ್ಯ ಬೇರೆ ಯಾವ ಸಾಹಿತಿಗಳ ಕೃತಿಗಳಿಗಿಂತ ಕಡಿಮೆಯಲ್ಲ. ನಮ್ಮ ಭಾಷೆ – ಸಂಸ್ಕೃತಿಗೆ ಯಕ್ಷಗಾನದ ಕೊಡುಗೆ ಬಹಳವಿದೆ’ ಎಂದರು.
ಪ್ರಶಸ್ತಿ ಪ್ರದಾನ:
ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷಗಾನ ಪ್ರತಿಷ್ಠಾನದ ವತಿಯಿಂದ ಕೆ.ಗೋವಿಂದ ಭಟ್ಟರಿಗೆ ರೂಪಾಯಿ 10,000/- ಗೌರವ ನಿಧಿಯೊಂದಿಗೆ ‘ಬಾಳಪ್ಪ ಶೆಟ್ಟಿ ಪ್ರಶಸ್ತಿ’ಯನ್ನು ಗಣ್ಯರು ಪ್ರದಾನ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಲ|ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ಸಂಸ್ಮರಣಾ ಭಾಷಣ ಮಾಡಿದರು. ಶ್ಯಾಮಲಾ ಪದ್ಮನಾಭ ಶೆಟ್ಟಿ ಪ್ರಶಸ್ತಿ ಫಲಕ ವಾಚಿಸಿದರು. ಕಡಬದ್ವಯ ಸಂಸ್ಮರಣ ಸಮಿತಿ ಅಧ್ಯಕ್ಷ ಮತ್ತು ಕೌಶಲ್ಯ ಕನ್ಸ್ಟ್ರಕ್ಷನ್ಸ್ ಮಾಲಿಕ ಸುಂದರ ಆಚಾರ್ಯ ಬೆಳುವಾಯಿ ಅತಿಥಿಗಳಾಗಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸುಧಾಕರ ರಾವ್ ಪೇಜಾವರ ವಂದಿಸಿದರು. ಎ.ಕೆ. ಜಯರಾಮ ಶೇಖ, ಕರುಣಾಕರ ಶೆಟ್ಟಿ ಪಣಿಯೂರು, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸುಧಾಕರ ರಾವ್ ಪೇಜಾವರ, ಉಮೇಶ ಆಚಾರ್ಯ ಗೇರುಕಟ್ಟೆ, ಸಿದ್ದಾರ್ಥ ಅಜ್ರಿ, ನಿವೇದಿತಾ ಶೆಟ್ಟಿ ಬೆಳ್ಳಿಪ್ಪಾಡಿ, ಸುಮಾ ಪ್ರಸಾದ್ ಉಪಸ್ಥಿತರಿದ್ದರು.
ತಾಳಮದ್ದಳೆ ‘ಶಾರದಾ ವಿವಾಹ’:
ಸಪ್ತಾಹದ ದ್ವಿತೀಯ ದಿನದ ಕಾರ್ಯಕ್ರಮವಾಗಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಮತ್ತು ಅಥಿತಿ ಕಲಾವಿದರಿಂದ ‘ಶಾರದಾ ವಿವಾಹ’ ಯಕ್ಷಗಾನ ತಾಳಮದ್ದಳೆ, ಜರಗಿತು.

