ಖ್ಯಾತ ಯಕ್ಷಗಾನ ಪ್ರಸಂಗ ಕರ್ತ ತಾಳಮದ್ದಳೆ ಅರ್ಥಧಾರಿ ಹವ್ಯಾಸಿ ಸ್ತ್ರೀ ವೇಷದಾರಿ ಕಂದಾವನ ರಘುರಾಮ ಶೆಟ್ಟಿ ಅವರು ತಮ್ಮ 89ನೇ ವರ್ಷ ವಯಸ್ಸಿನಲ್ಲಿ 26.11.2025ರ ಬುಧವಾರದಂದು ಸ್ವಗೃಹದಲ್ಲಿ ನಿಧನರಾದರು.
ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರುವರೆ ದಶಕಗಳ ಕಾಲ ಅಧ್ಯಾಪಕರಾಗಿ ಮತ್ತು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದರು . ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಬರೆದು ಮಕ್ಕಳಿಂದ ಅದನ್ನು ರಂಗಕ್ಕೆ ತರುವಲ್ಲಿ ನಿಷ್ಣಾತರಾಗಿದ್ದರು. ನಾಟಕ ನಟರಾಗಿ ಹಾಗೂ ನಿರ್ದೇಶಕರಾಗಿ ರಂಗಭೂಮಿಯಲ್ಲಿ ಅನನ್ಯ ಕೆಲಸ ಮಾಡಿದವರು ರಘುರಾಮ ಶೆಟ್ಟಿಯವರು. ಯಕ್ಷಗಾನ ಇವರಿಗೆ ಬಹಳ ಇಷ್ಟವಾದ ಕಲಾಪ್ರಕಾರವಾಗಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ಕಂದಾವರರೆಂದೇ ಗುರುತಿಸಲ್ಪಟ್ಟಿದ್ದ ಇವರು ತಮ್ಮ ಎಳವೆಯಲ್ಲಿಯೇ ಯಕ್ಷಗಾನದ ಹಾಡುಗಳನ್ನು ಹಾಡುತ್ತಾ “ಬಾಲ ಭಾಗವತ”ರೆಂದು ಮೆಚ್ಚುಗೆಗೆ ಪಾತ್ರರಾಗಿದ್ದರು. ಯಕ್ಷಗಾನ ಹವ್ಯಾಸವನ್ನು ಕೊನೆಯವರೆಗೂ ಉಳಿಸಿಕೊಂಡು ಬಂದ ಇವರು ಪ್ರಸಂಗ ಕರ್ತರಾಗಿ ಹಲವು ಉತ್ತಮ ಕೃತಿಗಳನ್ನು ಯಕ್ಷ ಲೋಕಕ್ಕೆ ಸಮರ್ಪಿಸಿದ್ದಾರೆ.
ರತಿ ರೇಖಾ, ವಸುವರಾಂಗಿ, ಚೆಲುವೆ ಚಿತ್ರಾವತಿ, ಶೂದ್ರ ತಪಸ್ವಿನಿ ಮತ್ತು ದೇವಿ ಬನಶಂಕರಿ ಇವರ ಪ್ರಖ್ಯಾತ ಪ್ರಸಂಗಗಳಾಗಿದ್ದವು. ಪ್ರಸ್ತುತ ರಂಗದಲ್ಲಿ ಈ ಪ್ರಸಂಗಗಳು ಈಗಲೂ ಜಾರಿಯಲ್ಲಿವೆ. ಇವರು ಅರ್ಥಧಾರಿಯಾಗಿ ಮತ್ತು ಹವ್ಯಾಸಿ ವೇಷಧಾರಿಯಾಗಿ ಬಹಳ ಗೌರವಕ್ಕೆ ಪಾತ್ರರಾಗಿದ್ದರು . ಕಂದಾವರರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ. ಹಲವು ಪ್ರಶಸ್ತಿ, ಪುರಸ್ಕಾರ, ಗೌರವಗಳು ಅವರಿಗೆ ಸಂದಿವೆ. ಕಳೆದ ವರ್ಷ “ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್” ಪ್ರಶಸ್ತಿ ಇವರಿಗೆ ಲಭಿಸಿತ್ತು. ಯಕ್ಷಗಾನ ಕಲಾರಂಗ 2013ರಲ್ಲಿ ಮಟ್ಟಿ ಮರಳಿದರಾವ್ ನೆನಪಿನ “ಯಕ್ಷಗಾನ ಕಲಾರಂಗ” ಪ್ರಶಸ್ತಿ ನೀಡಿ ಇವರನ್ನು ಗೌರವಿಸಿತ್ತು. ಪ್ರಸ್ತುತ ಸಾಲಿನಲ್ಲಿ ರಾಜ್ಯಮಟ್ಟದ “ಕೆಂಪೇಗೌಡ ಪ್ರಶಸ್ತಿ” ಪಡೆದಿದ್ದ ಇವರು ಪ್ರತಿಷ್ಠಿತ ಪ್ರಾರ್ಥಿಸುಬ್ಬ ಪ್ರಶಸ್ತಿಗೂ ಆಯ್ಕೆಯಾಗಿರುವುದು ಅವರ ಜ್ಞಾನಕ್ಕೆ ಸಾಕ್ಷಿಯಾಗಿದೆ.
