ಕಾಸರಗೋಡು: ಗಾಯಕರಾಗಿ ಹೆಸರು ಮಾಡಬೇಕೆಂದರೆ ಸತತ ಅಭ್ಯಾಸ ಮತ್ತು ಸಂಗೀತದ ಬಗ್ಗೆ ಶ್ರದ್ಧೆ, ಆಸಕ್ತಿ ಇರಬೇಕು. “ಸ್ವರ, ತಾಳ, ಲಯಗಳ ಮಿಲನವೇ ಸಂಗೀತ” ಎಂದು ಕಾಸರಗೋಡಿನ ನಿವೃತ್ತ ಡಿವೈಎಸ್ಪಿ, ಖ್ಯಾತ ಗೀತರಚನೆಗಾರ ಟಿ.ಪಿ. ರಂಜಿತ್ ಹೇಳಿದರು. ಅವರು ಕಾಸರಗೋಡಿನ ಖ್ಯಾತ ಸಾಹಿತ್ಯಿಕ-ಸಾಂಸ್ಕೃತಿಕ ಸಂಘಟನೆ ರಂಗಚಿನ್ನಾರಿ ಕಾಸರಗೋಡು (ರಿ) ಏರ್ಪಡಿಸಿದ
ಕರೋಕೆ ಗಾಯಕರ ಸಮ್ಮಿಲನ ‘ಅಂತರಧ್ವನಿ-11’ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ದಿನಾಂಕ ನವೆಂಬರ್ 22ರಂದು ಕಾಸರಗೋಡಿನ ಕರೆಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ‘ಕಲಾವಿದರು ಒಳ್ಳೆಯ ಸಂಗೀತ ಕೇಳುವ ಹವ್ಯಾಸ ಬೆಳೆಸಿಕೊಳ್ಳಬೇಕು – ಮನಸ್ಸಿಗೆ ನೋವಾದಾಗಲೆಲ್ಲಾ ಒಳ್ಳೆಯ ಸಂಗೀತ ಕೇಳುವುದರಿಂದ ಮನಸ್ಸಿಗೆ ಸಂತಸ ಲಭಿಸುತ್ತದೆ’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಸರಗೋಡಿನ ಖ್ಯಾತ ನೇತ್ರ ತಜ್ಞ, ಸಾಮಾಜಿಕ-ಧಾರ್ಮಿಕ ಮುಂದಾಳು ಡಾ। ಅನಂತ ಕಾಮತ್ ಅವರು ಮಾತನಾಡಿ ‘ಕಳೆದ ಎರಡು ದಶಕಗಳಿಂದ ಕಾಸರಗೋಡಿನಲ್ಲಿ ನಿರಂತರವಾಗಿ ಸಾಂಸ್ಕೃತಿಕ-ಸಾಹಿತ್ಯಿಕ ರಂಗದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ರಂಗ ಚಿನ್ನಾರಿ ಸಂಸ್ಥೆ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಖ್ಯಾತ ಗಾಯಕಿ ಶ್ರೀಮತಿ ಶ್ರೀದೇವಿ ಪ್ರಾರ್ಥಿಸಿದರು. ರಂಗಚಿನ್ನಾರಿಯ ನಿರ್ದೇಶಕರೂ, ಅಂತರಧ್ವನಿಯ ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಸಂಸ್ಥೆಯು ಬೆಳೆದು ಬಂದ ವಿವರವನ್ನು ತಿಳಿಸಿದರು. ಕಾಸರಗೋಡಿನ ಖ್ಯಾತ ನ್ಯಾಯವಾದಿ, ನೋಟರಿ ಎ.ಎನ್. ಅಶೋಕ ಕುಮಾರ್ ಇವರು ಸ್ವಾಗತಿಸಿದರು. ಸ್ವರಚಿನ್ನಾರಿಯ ಕಾರ್ಯದರ್ಶಿ ಕಿಶೋರ ಪೆರ್ಲ, ಗಾಯಕ ರತ್ನಾಕರ ಓಡಂಗಲ್ಲು, ರಂಗಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿ, ನಿರ್ದೇಶಕ ಸತ್ಯನಾರಾಯಣ ಕೆ. ವೇದಿಕೆಯಲ್ಲಿದ್ದರು.
ಸಂಜೆ ಜರುಗಿದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯರಾದ ವೈ. ಸತ್ಯನಾರಾಯಣ ಅವರು ಗಾಯಕ-ಗಾಯಕಿಯರನ್ನು ಉದ್ದೇಶಿಸಿ ಮಾತನಾಡಿದರು. ರಂಗಕರ್ಮಿ ಜನಾರ್ದನ ಅಣಂಗೂರು ಉಪಸ್ಥಿತರಿದ್ದರು. ’ಅಂತರಧ್ವನಿ-11’ ರ ತಿಂಗಳ ಗಾಯಕರಾಗಿ ಎನ್. ಎಂ. ಭಟ್ ಹಾಗೂ ವಿನೋದ್, ಗಾಯಕಿಯಾಗಿ ಗೀತಪ್ರಿಯ ಇವರು ಆರಿಸಲ್ಪಟ್ಟರು. ಭಾಗವಹಿಸಿದ ಎಲ್ಲಾ ಎಪ್ಪತ್ತು ಗಾಯಕ-ಗಾಯಕಿಯರಿಗೆ ಸಾಹಿತಿ ವೈ. ಸತ್ಯಾನಾರಾಯಣ ಇವರು ಬರೆದ ಪುಸ್ತಕಗಳನ್ನು ವಿತರಿಸಲಾಯಿತು. ಗಾಯಕಿ ಶ್ರೀಮತಿ ಬಬಿತಾ ಆಚಾರ್ಯ, ಶ್ರೀಮತಿ ಉಷಾ ಟೀಚರ್, ಗಾಯಕಿ ಪ್ರತಿಜ್ಞಾ ಕಣ್ಗಲ್, ವಿಜಯಲಕ್ಷ್ಮೀ ಶ್ಯಾನುಭೋಗ್, ಅಕ್ಷತಾ ವರ್ಕಾಡಿ ಕಾರ್ಯಕ್ರಮವನ್ನು ನಿರ್ವಹಿಸಿದರು.

