ಕುಡುಪು : ಸ್ಕಂದ ಷಷ್ಠಿಯ ಸಂದರ್ಭದಲ್ಲಿ ‘ಯಕ್ಷಮಿತ್ರರು’ ಕುಡುಪು ಇವರು ಆಯೋಜಿಸಿದ್ದ ವಿಂಶತಿ ಕಾರ್ಯಕ್ರಮವು ದಿನಾಂಕ 26 ನವೆಂಬರ್ 2025ರಂದು ಕುಡುಪು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ತಂತ್ರ ಮಾಣಿಕ್ಯ ಶ್ರೀ ಕೆ. ನರಸಿಂಹ ತಂತ್ರಿಗಳು ಆಶೀರ್ವಚನ ನೀಡುತ್ತಾ, “ಕಲೆ, ಕಲಾ ಪ್ರಸಾರ ಯಕ್ಷಗಾನ ರಂಗದಲ್ಲಿ ವೇಗವಾಗಿ ಸಾಗುತ್ತದೆ. ಅದು ವೃದ್ಧಿಯಾದಂತೆ ಅದನ್ನು ಆಶ್ರಯಿಸಿದ ಕಲಾವಿದನೂ ಬೆಳೆಯುತ್ತಾನೆ. ತನ್ನಲ್ಲಿನ ಕಲಾಪ್ರೌಢಿಮೆಯನ್ನೂ ಒರೆಗೆ ಹಚ್ಚಿ ಪ್ರಬುದ್ಧವಾಗಿ ಹೊರಬಂದು ಒರೆಗಿಟ್ಟ ಚಿನ್ನದಂತಾಗುತ್ತಾನೆ. ಮೂವತ್ತೈದು ವರ್ಷಗಳ ನಿರಂತರ ಕಲಾಸೇವೆ ವಾಟೆಪಡ್ಪು ವಿಷ್ಣುಶರ್ಮರನ್ನು ಆ ಎತ್ತರಕ್ಕೆ ಯಕ್ಷಗಾನ ಬೆಳೆಸಿದೆ. ಅಗಾಧ ಪುರಾಣ ಜ್ಞಾನ, ಭಾಷಾ ಪ್ರೌಢಿಮೆ, ಪ್ರಸಂಗಾವಧಾನತೆ ಶರ್ಮರನ್ನು ಉತ್ತಮ ಕಲಾವಿದರ ಸಾಲಲ್ಲಿ ನಿಲ್ಲಿಸುತ್ತದೆ. ಕಟೀಲು ತಾಯಿಯ ಸೇವೆ ಇನ್ನೂ ಅನೇಕ ಕಾಲ ಸಾಗಲಿ” ಎಂದು ಶುಭಾಶೀರ್ವಾದ ನೀಡಿದರು.
ಮಾಜಿ ಸಚೇತಕ ಅಭಯಚಂದ್ರ ಜೈನ್ ರವರು “ಯಕ್ಷಗಾನ ಮೇಳಗಳು ದೇವಸ್ಥಾನದ ಹೆಸರಿನಲ್ಲಿಯೇ ತಿರುಗಾಟ ಮಾಡುತ್ತವೆ. ಹಾಗಾಗಿ ಕಲಾವಿದರಿಗೆ ದೇವರ ಅನುಗ್ರಹವಿದೆ. ಕುಡುಪು ಕ್ಷೇತ್ರವೂ ಅನಾದಿಯಿಂದ ಪ್ರಸಿದ್ಧಿಯಲ್ಲಿ ಇದೆ. ಇಲ್ಲಿಯ ಸನ್ಮಾನ ಶರ್ಮರಿಗೆ ಇನ್ನೂ ಶ್ರೇಯಸ್ಸನ್ನು ನೀಡಲಿ” ಎಂದು ಹಾರೈಸಿದರು.

“ನಾನು ಏನನ್ನಾದರೂ ಸಾಧಿಸಿದ್ದರೂ, ಇನ್ನೂ ಸಾಧಿಸಲು ಬಹಳಷ್ಟಿದೆ. ಆದರೆ ಯಕ್ಷಗಾನ ನನಗೆ ಸಿದ್ಧಿ- ಪ್ರಸಿದ್ಧಿಯನ್ನು ನೀಡಿದೆ. ಶ್ರೀದೇವಿ ನನ್ನನ್ನು ಅನುಗ್ರಹಿಸಿದ್ದಾಳೆ. ಇಂದು ಅನಂತಪದ್ಮನಾಭ ಸ್ವಾಮಿ ಸನ್ನಿಧಿಯಲ್ಲಿ ಯಕ್ಷ ಮಿತ್ರರು ನೀಡಿದ ಸನ್ಮಾನ ನನಗೆ ದೊಡ್ಡ ಪ್ರಸಾದ ಎಂದು ತಿಳಿಯುತ್ತೇನೆ. ಎಲ್ಲರಿಗೂ ನಾನು ಋಣಿ” ಎಂದು ಸನ್ಮಾನಿತ ವಾಟೆಪಡ್ಪು ವಿಷ್ಣುಶರ್ಮರು ಕೃತಜ್ಞತೆ ಅರ್ಪಿಸಿದರು.

ಇಪ್ಪತ್ತನೆಯ ವರ್ಷದ ಹರ್ಷದಲ್ಲಿರುವ (ವಿಂಶತಿ) ಯಕ್ಷಮಿತ್ರರು ಸಂಘಟನೆಯ ಅಧ್ಯಕ್ಷರಾದ ವೇದಮೂರ್ತಿ ಕೃಷ್ಣರಾಜ ತಂತ್ರಿಗಳು ಸ್ವಾಗತ, ಪ್ರಸ್ತಾವನೆ ಮಾಡಿದರು. ಕೋಶಾಧಿಕಾರಿ ರಾಘುವೇಂದ್ರ ಭಟ್ ಸನ್ಮಾನ ಪತ್ರ ವಾಚಿಸಿದರು. ಯಕ್ಷಗುರು ಸರಯೂ ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಕೆ. ಬಾಸ್ಕರ್, ಸುಜನ್ ದಾಸ್ ಕುಡುಪು, ಉದಯಕುಮಾರ್ ಕೆ., ಜನಾರ್ಧನ ಕೆ. ಅತಿಥಿಗಳಾಗಿದ್ದರು. ಅಧ್ಯಾಪಕ, ಯಕ್ಷಮಿತ್ರರು ಈ ಸಂಸ್ಥೆಯ ಕಾರ್ಯದರ್ಶಿ ಕೆ. ವಾಸುದೇವ ರಾವ್ ನಿರ್ವಹಿಸಿ, ವಂದಿಸಿದರು. ಬಳಿಕ ಬಪ್ಪನಾಡು ಮೇಳದವರಿಂದ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.
