ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾ ಕೇಂದ್ರ (ರಿ.) ಜಲ್ಲಿಗುಡ್ಡೆ ಮಂಗಳೂರು ಇವರ ವತಿಯಿಂದ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಪಡೀಲ್ ಇವರ ಸಹಭಾಗಿತ್ವದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಇವರ ಸಹಯೋಗದೊಂದಿಗೆ ಯಕ್ಷರಂಗದ ಧೀಮಂತ ಪ್ರತಿಭೆ ‘ದಿ. ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 07 ಡಿಸೆಂಬರ್ 2025ರಂದು ಸಂಜೆ 3-30 ಗಂಟೆಗೆ ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಲ್ಲಿಗುಡ್ಡೆ ಸ್ವಸ್ತಿಕ್ ಕಲಾ ಕೇಂದ್ರ ವತಿಯಿಂದ ನೀಡಲಾಗುವ 2025-26ನೇ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡ ಇವರನ್ನು ಆಯ್ಕೆ ಮಾಡಲಾಗಿದೆ.
ಯಕ್ಷರಂಗದ ಶ್ರೀಮಂತ ಪ್ರತಿಭೆ ಬಾಬು ಕುಡ್ತಡ್ಕ ಇವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಶಾಶ್ವತ ಫಲಕ, ಸ್ಮರಣಿಕೆ, ಪದಕ ಹಾಗೂ ರೂ.10 ಸಾವಿರ ನಗದು ಒಳಗೊಂಡಿದೆ. ಪುತ್ತಿಗೆ ಕುಮಾರ ಗೌಡ ಇವರು ವೇಣೂರು, ಧರ್ಮಸ್ಥಳ, ಕೂಡ್ಲು, ಕುಂಡಾವು ಮೇಳಗಳಲ್ಲಿ ಮತ್ತು 1976ರಿಂದ 25 ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಶೇಣಿ, ಸಾಮಗ ಕಾಲಘಟ್ಟದ ಕಲಾವಿದರಾದ ಕುಮಾರ ಗೌಡರು ಮೇಳಗಳಲ್ಲಿ 53 ವರ್ಷ ತಿರುಗಾಟ ನಡೆಸಿ, ಉತ್ತಮ ಹೆಜ್ಜೆಗಾರಿಕೆ ಹಾಗೂ ಮಾತುಗಾರಿಕೆಗೆ ಹೆಸರಾಗಿದ್ದ ಇವರು ದೇವೇಂದ್ರ, ಅರ್ಜುನ, ಸುಗ್ರೀವ, ಭೀಮ, ಶ್ರೀರಾಮ ಧರ್ಮರಾಯ ಮುಂತಾದ ಪಾತ್ರಗಳ ಮೂಲಕ ಮನೆಮಾತಾಗಿದ್ದರು. ಉತ್ತಮ ಕೃಷಿಕನಾಗಿ ಕುಡುಬಿ ಜನಾಂಗದ ನಾಯಕರಾಗಿಯೂ ಪ್ರಸಿದ್ಧರಾಗಿದ್ದಾರೆ.
ಕಲಾಕೇಂದ್ರದ ಅಧ್ಯಕ್ಷೆ ಲಲಿತಾ ಗೌಡ ಅಧ್ಯಕ್ಷತೆ ವಹಿಲಿದ್ದು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ರಂಗ ಸಾಹಿತಿ ಚಂದ್ರಶೇಖರ್ ಕರ್ಕೇರ, ಕುಲಾಲ ಯುವ ವೇದಿಕೆ ಅಧ್ಯಕ್ಷ ಅನಿಲ್ ದಾಸ್, ಲೆಕ್ಕಪರಿಶೋಧಕ ಎ. ಕೃಷ್ಣ ಮೂರ್ತಿ, ರಾಮಕೃಷ್ಣ ಬಾಲಕಾಶ್ರಮದ ನಿರ್ವಾಹಕ ಸ್ವಾಮಿ ಯುಗೇಶಾನಂದ ಮೊದಲಾದವರು ಭಾಗವಹಿಸಲಿದ್ದಾರೆ. ಡಾ. ಪ್ರಿಯಾ ಹರೀಶ್ ಅಭಿನಂದನಾ ಭಾಷಣ ಮಾಡುವರು. ಸಭಾ ಕಾರ್ಯಕ್ರಮಕ್ಕೂ ಮೊದಲು ‘ಶಾಂಭವಿ ವಿಜಯ’ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

