ಶಿರ್ವ : ಪ್ರದರ್ಶನಾ ಸಂಘಟನಾ ಸಮಿತಿ ಶಿರ್ವ, ಯಕ್ಷಗಾನ ಕಲಾರಂಗ ಉಡುಪಿ ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶಿರ್ವಾದ ಮಹಿಳಾ ಸೌಧದ ಆವರಣದಲ್ಲಿ ದಿನಕ್ಕೆ ಎರಡರಂತೆ ಕಾಪು ಕ್ಷೇತ್ರದ ಆರು ಶಾಲೆಗಳ ಪ್ರದರ್ಶನ ಜರಗಲಿದ್ದು, ದಿನಾಂಕ 05 ಡಿಸೆಂಬರ್ 2025ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ, ಯಕ್ಷಗಾನದ ಮಹತ್ವ ತಿಳಿಸಿ, “ಈ ಮಹಾಭಿಯಾನ ಯಶಸ್ವಿಯಾಗುವಲ್ಲಿ ಯಕ್ಷಗಾನ ಕಲಾರಂಗದ ನಾಯಕತ್ವ, ಕಾರ್ಯಕರ್ತರ ನಿಸ್ಪೃಹ ದುಡಿಮೆಯ ಕೊಡುಗೆ ಕಾರಣ” ಎಂದರು. ಅಬ್ಬೆಟ್ಟುಗುತ್ತು ಸಾಯಿನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂ. ಗಂಗಾಧರ ರಾವ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ವಿಠಲ ಅಂಚನ್, ಡಾ. ಸ್ಫೂರ್ತಿ ಬಿ. ಶೆಟ್ಟಿ, ಗೋಪಾಲ ಗುರುಸ್ವಾಮಿ ಅಭ್ಯಾಗತರಾಗಿ ಭಾಗವಹಿಸಿದ್ದರು.

ಟ್ರಸ್ಟಿಗಳಾದ ವಿ.ಜಿ. ಶೆಟ್ಟಿ ನಾರಾಯಣ ಎಂ. ಹೆಗಡೆ, ಕೆ. ಶ್ರೀಪತಿ ಕಾಮತ್, ನಟರಾಜ ಉಪಾಧ್ಯ ಉಪಸ್ಥಿತರಿದ್ದರು. ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮೊದಲ ಪ್ರದರ್ಶನವಾಗಿ ಎಸ್.ವಿ.ಎಚ್. ಪ್ರೌಢಶಾಲೆ ಇನ್ನಂಜೆ ಇಲ್ಲಿಯ ವಿದ್ಯಾರ್ಥಿಗಳಿಂದ ‘ಮೇದಿನಿ ನಿರ್ಮಾಣ ಮತ್ತು ಮಹಿಷ ಮರ್ಧಿನಿ’ ಅನಂತರ ಕುತ್ಯಾರಿನ ಸೂರ್ಯಚೈತನ್ಯ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಮಹಿಷ ವಧೆ’ ಯಕ್ಷಗಾನ ಸೊಗಸಾಗಿ ಪ್ರದರ್ಶನಗೊಂಡಿತು.


