ಬೆಂಗಳೂರು: ಸ್ಪಿನಿಂಗ್ ಟ್ರೀ ಥಿಯೇಟರ್ ಕಂಪನಿ ಪ್ರಸ್ತುತ ಪಡಿಸುವ ಶಕೀಲ್ ಅಹ್ಮದ ನಿರ್ದೇಶನದ ‘ಅನಾಮಿಕನ ಸಾವು’ ನಾಟಕದ ಪ್ರದರ್ಶನವು ಇದೇ ಬರುವ ದಿನಾಂಕ 11-05-2023ರಂದು ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ನಡೆಯಲಿದೆ.
ನಾಟಕದ ಆಶಯ
ಒಂದು ಕಾಗದ, ಒಂದು ಗುರುತಿನ ಚೀಟಿ,
ನಮ್ಮ ಇರುವಿಕೆಯನ್ನೇ ನಿರ್ಧರಿಸುವಂತಾದರೆ?
ನಮ್ಮ ಅಸ್ತಿತ್ವವನ್ನೇ ಅಲುಗಾಡಿಸುವಂತಾದರೆ?
ಹಾಗಾಗಿದ್ದಲ್ಲಿ,
ನಾವು ಹುಟ್ಟಿದ್ದು-ಬೆಳೆದದ್ದು-ಬದುಕಿದ್ದು ಸುಳ್ಳೆ?
ನಮ್ಮ ನರಗಳಲ್ಲಿ ಹರಿಯುವ ರಕ್ತ ಸುಳ್ಳೆ?
ನಮ್ಮ ಸಾಕಿಸಲುಹಿದ ಈ ನೆಲ ಸುಳ್ಳೆ?
ಹೀಗೆಯೇ,
ಹುಟ್ಟಿದ ನೆಲದಿಂದಲೇ ನೆಲೆ ಕಳೆದುಕೊಳ್ಳಬೇಕಾಗಿ ಬಂದಾಗ,
ತನ್ನ ಅಸ್ತಿತ್ವಕ್ಕಾಗಿ ಒದ್ದಾಡುವವನ ಕಥೆ ಇದು.
ತಮ್ಮ ಹೆಸರು ಮತ್ತು ಬದುಕೆಂಬ ಎರಡು ದಂಡೆಯ ನಡುವಿರುವ
ಅಸ್ತಿತ್ವವೆಂಬ ತೂಗುಯ್ಯಾಲೆಯಲ್ಲಿ ತಮ್ಮನ್ನು ತಾವು ಹುಡುಕುತ್ತಿರುವವರ,
ನೆಲೆ ಕಾಣಬಯಸುವವರ ಕಥೆ
ಅಥೊಲ್ ಫುಗಾರ್ಡ
ದಕ್ಷಿಣ ಆಫ್ರಿಕಾದ ನಟ ಮತ್ತು ನಿರ್ದೇಶಕರಾದ ಅಥೊಲ್ ಫುಗಾರ್ಡ ಅವರು ತಮ್ಮದೇ ಆದ ವಿಶಿಷ್ಟ ನಾಟಕೀಯ ಅಭಿವ್ಯಕ್ತಿಯಿಂದಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾದ ನಾಟಕಕಾರರೂ ಹೌದು. ರಂಗಭೂಮಿಯನ್ನು ಪ್ರತಿರೋಧದ ಮಾಧ್ಯಮವಾಗಿ ಬಳಸಿಕೊಂಡ ಫುಗಾರ್ಡ ಅವರು ವರ್ಣಭೇದ ವಿರೋಧಿ ಚಳುವಳಿಯೊಂದಿಗೆ ಕೈಜೋಡಿಸಿದ್ದರಲ್ಲದೇ ಹಲವಾರು ಹೊಸ ನಟರು ಮತ್ತು ಬರಹಗಾರರನ್ನು ಸೃಷ್ಟಿಸಿದರು. ಅವರ ಹಲವಾರು ನಾಟಕಗಳು ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ದಿ ಐಲ್ಯಾಂಡ, ಸಾಂಗ್ ಆಫ್ ದಿ ವ್ಯಾಲಿ, ಟ್ರೈನ್, ಡ್ರೈವರ್, ಬ್ಲಡ್ ನಾಟ್, ಕೋರ್ಟ ಹಾಗೂ ಸೇಜ್ವ ಬಾನ್ಸಿ ಇಸ್ ಡೆಡ್. ಪ್ರಾರಂಭದಲ್ಲಿ ‘ಬರ್ಟೊಲ್ಟ ಬ್ರೆಕ್ಟ’ನ ನಿರೂಪಣಾ ಶೈಲಿಯನ್ನು ಮುಂದುವರೆಸಿದ ಫುಗಾರ್ಡ ಅವರು, ನಂತರದಲ್ಲಿ ದಕ್ಷಿಣ ಆಫ್ರಿಕಾದ ಸಂಸ್ಕೃತಿಯನ್ನು ಸೂಕ್ತವಾಗಿ ಬಿಂಬಿಸುವಂತಹ ತಮ್ಮದೇ ಆದ ಅಭಿವ್ಯಕ್ತಿ ಮಾರ್ಗವನ್ನು ಕಂಡುಕೊಂಡರು.
ಶಕೀಲ್ ಅಹ್ಮದ
ಲೋಣಿ ಬಿ.ಕೆ. (ಬಿಜಾಪೂರ) ಊರಿನವರಾದ ಶಕೀಲ್ ಅಹ್ಮದ್, ಸಾಂಪ್ರದಾಯಿಕ ಮತ್ತು ಸಮಕಾಲಿನ ರಂಗಭೂಮಿಯ ತಂತ್ರಗಳನ್ನು ಬೆಸೆಯುವುದರ ಮೂಲಕ ತಮ್ಮದೇ ಆದ ರಂಗತರಬೇತಿಯನ್ನು ಸೃಷ್ಟಿಸುತ್ತಿರುವುದಲ್ಲದೇ ಅದರ ಪ್ರಯೋಗಕ್ಕಾಗಿ ‘ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ನೀನಾಸಂ ಹಾಗೂ ಸಿಂಗಾಪೂರಿನ ಇಂಟರ್ ಕಲ್ಚರಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ಐಟಿಐ)ನಲ್ಲಿ ಅಭಿನಯ ಕುರಿತು ತರಬೇತಿ ಪಡೆದಿರುತ್ತಾರೆ. ಬರ್ಲಿನ್‌ನ ಇಂಟರ್‌ನ್ಯಾಶನಲ್ ಸಿಂಪೊಜಿಯಂನಲ್ಲಿ ಐಟಿಐಯನ್ನು ಪ್ರತಿನಿಧಿಸಿರುತ್ತಾರೆ. ಐಟಿಐನಲ್ಲಿ ಕೇರಳದ ಕೂಡಿಯಾಟ್ಟಂ, ಜಪಾನಿನ ನೋಹ್ ರಂಗಭೂಮಿ, ಚೀನಾದ ಬೀಜಿಂಗ್ ಓಪೆರಾ ಹಾಗೂ ಇಂಡೋನೇಷ್ಯಾದ ವಯಾಂಗ್ ವಾಂಗ್ ಎಂಬ ಏಷ್ಯಾದ ಪ್ರಮುಖ ಸಾಂಪ್ರದಾಯಿಕ ರಂಗ ಪ್ರಕಾರಗಳೊಂದಿಗೆ ಇಂಗ್ಲೆಂಡಿನ ಫಿಲಿಪ್ ಝರಿಲಿಯವರೊಂದಿಗೆ ಸೈಕೋಫಿಜಿಕಲ್, ಆಸ್ಟ್ರೇಲಿಯಾದ ಆರ್ನಿ ನೀಮ್ ಅವರೊಂದಿಗೆ ಸ್ಟಾನಿಸ್ಲಾವಸ್ಕಿ ಮತ್ತು ಮೈಕೆಲ್ ಚೆಕಾಫ್ ತರಬೇತಿ, ಬ್ರೆಜಿಲ್ಲಿನ ಲೀಲಾ ಅಲನೀಜ್ ಅವರೊಂದಿಗೆ ಕರ್ಪೋರಿಯಲ್ ಮೈಮ್ ಮತ್ತು ಅಂಥ್ರೋಪಾಲಜಿ ಥಿಯೇಟರ್, ಅರ್ಜೆಂಟೈನದ ಗಿಜೆರ್ಮೊ ಅಂಜೆಲೆಲ್ಲಿ ಅವರೊಂದಿಗೆ ವಿಂಡ ಡಾನ್ಸ ಮತ್ತು ಕ್ಲೌನಿಂಗ್ ಎಂಬ ಸಮಕಾಲಿನ ರಂಗಭೂಮಿಯ ತಂತ್ರಗಳಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ‘ಜನುಮನದಾಟ’ ತಂಡದಲ್ಲಿ ನಟರಾಗಿ ಹಾಗೂ ಪ್ಯಾರಿಸ್‌ನ ‘ಪಾದುದ್ಯು’, ‘ಕ್ಯಾನೊಪೆ’, ‘ಕಾಜ್’ ಮತ್ತು ‘ಇಪ್ಯಾಕ್’ ಥಿಯೇಟರ್ ಕಂಪನಿಗಳಲ್ಲಿ, ಕರ್ನಾಟಕದ ಹಲವು ತಂಡಗಳಲ್ಲಿ ಹಾಗೂ ರಂಗ ಶಾಲೆಗಳಲ್ಲಿ ತರಬೇತುದಾರರಾಗಿ ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಪ್ರಸ್ತುತ ‘ಸ್ಪಿನಿಂಗ್ ಟ್ರೀ ಥಿಯೇಟರ್’ ಕಂಪನಿಯ ನಟ ಹಾಗೂ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ನಿರ್ದೇಶನದ ನಾಟಕಗಳು – ಉಳಿದ ದೇಹಗಳು, ರೇಖೆಗಳು, ಮದುವೆ ಹೆಣ್ಣು, ಉಳಿದ ಸಾಕ್ಷಿಗಳು, ಅಪರಿಚಿತ ಘಳಿಗೆ, …ಫಾರ್ ಎ ಬೈಟ್ ಆಫ್ ಫೂಡ್ ಹಾಗೂ ಅನಾಮಿಕನ ಸಾವು.
ನಟರು: ವಿಶಾಲ್ ಪಾಟೀಲ್, ಶೋಧನ ಬಸರೂರು, ಸುಮಂತ ಚನ್ನರಾಯಪಟ್ಟಣ
ಸ್ಪಿನ್ನಿಂಗ್ ಟ್ರೀ ಥಿಯೇಟರ್
‘ಸ್ಪಿನಿಂಗ್ ಟ್ರೀ ಥಿಯೇಟರ್ ಕಂಪನಿಯು ಶಕೀಲ್ ಅಹ್ಮದ್ ಅವರು ಸ್ಥಾಪಿಸಿದ ಪ್ರಾಯೋಗಿಕ ರಂಗತಂಡ. ಈ ಸಂಸ್ಥೆಯು ಬಹಳಷ್ಟು ಕಾಲ ರಂಗಪ್ರಕಾರಗಳಲ್ಲಿ ನಡೆಸಿದ ಸಂಶೋಧನೆಯ ಫಲವಾಗಿ ರೂಪುಗೊಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಯುವ ಕಲಾವಿದರು ತಂಡದೊಂದಿಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ. ಈ ತಂಡದಲ್ಲಿ ಫಲಿತಾಂಶಕ್ಕಿಂತ, ತರಬೇತಿ ಹಾಗೂ ಪ್ರಕ್ರಿಯೆಗೆ ಆದ್ಯತೆ ನೀಡಲಾಗುತ್ತಿದೆ. ಈ ಕ್ರಿಯಾಶೀಲ ಪ್ರಯೋಗಾಲಯವನ್ನು ರಂಗಭೂಮಿಯ ವಿಭಿನ್ನ ರಂಗಪ್ರಕಾರಗಳನ್ನೊಳಗೊಂಡು ಹೆಣೆಯಲಾಗಿದೆ. ಕ್ರಿಯೆಯ ಹುಟ್ಟಿನೆಡೆಗೆ, ಸ್ಥಬ್ದ ನಿಲುವಿನೆಡೆಗೆ ಈ ತಂಡದ ಹುಡುಕಾಟ, ನಮ್ಮ ಸಂಘಟಿತ ಸ್ಮೃತಿಗಳ ಆಳದಲ್ಲಿ ಇರುವ ಸಂಸ್ಕೃತಿಗಳ ಘಮಲಿನ ನಡುವೆ ಸುಳಿದಾಡುವ ದೇಹ ಭಾಷ್ಯೆಗಳ ಹುಡುಕಾಟ. ಈ ಪ್ರಕಾರವಾಗಿ, ಸ್ಪಿನಿಂಗ್ ಟ್ರೀ ಥಿಯೇಟರ್ ಕಂಪನಿಯು ಹಲವಾರು ಕಾರ್ಯಗಾರಗಳು ಹಾಗೂ ಪ್ರಯೋಗಗಳನ್ನು ಹಮ್ಮಿಕೊಂಡಿದೆ.
ಉಳಿದ ಸಾಕ್ಷಿಗಳು, ದ ಅವರ ವಿ ನ್ಯು ನಥಿಂಗ ಅಬೌಟ್ ಈಚ್ ಅದರ್, ಗಿಲಿ ಗಿಲಿ ಪುವ್ವಾ, …..ಫಾರ ಎ ಬೈಟ್ ಆಫ್ ಫೂಡ್ ಹಾಗೂ ಅನಾಮಿಕನ ಸಾವು ಈ ತಂಡದ ಪ್ರಯೋಗಗಳು.