ಬೆಳ್ಳಾರೆ : ಯಕ್ಷ ಕಲಾಬೋಧಿನೀ ಬೆಳ್ಳಾರೆ ಇದರ ವತಿಯಿಂದ ನಡೆಸುತ್ತಿರುವ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 23 ನವೆಂಬರ್ 2025ರಂದು ನಡೆಯಿತು.
ತರಗತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಯಕ್ಷ ಬೊಳ್ಳಿ ಕಡಬ ದಿನೇಶ್ ರೈರವರು “ಯಕ್ಷಗಾನ ನನಗೆ ಸರ್ವಸ್ವವನ್ನು ನೀಡಿದೆ. ಆದರೆ ಯಕ್ಷಗಾನಕ್ಕೆ ನನ್ನ ಕೊಡುಗೆ ಅತ್ಯಲ್ಪ. ಯಕ್ಷಗಾನದಿಂದ ಸಂತೋಷವನ್ನು ಕಂಡಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿ ನಾಟ್ಯ ಕಲಿತ ವಿದ್ಯಾರ್ಥಿಗಳು ಉತ್ತಮ ಕಲಾವಿದರಾಗಿ ರೂಪಗೊಳ್ಳಲಿ” ಎಂದು ಶುಭ ಹಾರೈಸಿದರು. ಆಶೀರ್ವಚನ ನೀಡಿದ ಶ್ರೀ ಬ್ರಹ್ಮ ಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯರು “ಜೀವಂತ ಕಲೆಯಾದ ಯಕ್ಷಗಾನವನ್ನು ಎಲ್ಲರೂ ಪ್ರೋತ್ಸಾಹಿಸಬೇಕು. ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಯಕ್ಷಗಾನ ಸಂಘಟಕರಾಗಿ ಕಲೆಯನ್ನು ಬೆಂಬಲಿಸಬೇಕು” ಎಂದು ತಿಳಿಸಿದರು.


ಯಕ್ಷ ಕಲಾಬೋಧಿನೀ ಬೆಳ್ಳಾರೆ ಇದರ ಗೌರವಾಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ರೈ ಪನ್ನೆ ಇವರು ಮಾತನಾಡಿ “ಯಕ್ಷಗಾನ ನಾಟ್ಯ ಕಲಿವ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಆಸಕ್ತಿಯಿಂದ ಅಭ್ಯಾಸ ಮಾಡಿದಾಗ ಯಶಸ್ಸು ದೊರೆಯುತ್ತದೆ” ಎಂದು ಶುಭ ಹಾರೈಸಿದರು. ಅಂತಾರಾಷ್ಟ್ರೀಯ ಕ್ರೀಡಾ ಪಟು ನಿವೃತ್ತ ಶಿಕ್ಷಕರೂ ಯಕ್ಷಗಾನ ಕಲಾವಿದರೂ ಆದ ಶ್ರೀ ಸುಭಾಶ್ಚಂದ್ರ ರೈ ತೋಟ ಅತಿಥಿಗಳನ್ನು ಪರಿಚಯಿಸಿದರು. ನಾಟ್ಯ ಗುರು ಪಾವಂಜೆ ಮೇಳದ ಕಲಾವಿದರೂ ಆದ ಶ್ರೀ ಮಹೇಶ ಎಡನೀರು ಶುಭ ಹಾರೈಸಿದರು. ಬೆಳ್ಳಾರೆ ಜೇಸಿಸ್ ನ ನಿಯೋಜಿತ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪೆರ್ಲಂಪಾಡಿ ಹಾಗೂ ಯಕ್ಷ ಪೋಷಕರಾದ ಶ್ರೀ ಉದಯ ಕುಮಾರ್ ಭಟ್ ಕುರಿಯಾಜೆ ಮಾತಿನ ಮೂಲಕ ಶುಭ ಹಾರೈಸಿದರು. ಯಕ್ಷಗಾನಕ್ಕೆ ಅನರ್ಘ್ಯ ಸೇವೆ ಸಲ್ಲಿಸಿದ ಶ್ರೀ ಬ್ರಹ್ಮ ಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯರು ಮತ್ತು ಯಕ್ಷ ಬೊಳ್ಳಿ ಶ್ರೀ ಕಡಬ ದಿನೇಶ್ ರೈ ರವರವನ್ನು ಯಕ್ಷ ಕಲಾಬೋಧಿನೀ ವತಿಯಿಂದ ಸನ್ಮಾನಿಸಲಾಯಿತು. ಯಕ್ಷ ಕಲಾಬೋಧಿನೀ ಬೆಳ್ಳಾರೆ ಇದರ ಅಧ್ಯಕ್ಷರಾದ ಶ್ರೀ ಲೋಕೇಶ್ ತಂಟೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಧೃತಿ ಪಡ್ಪು ಪ್ರಾರ್ಥಿಸಿದರು. ಕೋಶಾಧಿಕಾರಿ ಶ್ರೀಮತಿ ಭಾರತಿ ಕೆ.ಪಿ. ಅತಿಥಿಗಳನ್ನು ಸ್ವಾಗತಿಸಿ, ಯಕ್ಷ ಕಲಾಬೋಧಿನೀ ಬೆಳ್ಳಾರೆ ಇದರ ಸಂಚಾಲಕರಾದ ಶ್ರೀ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
