ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ, ಯಕ್ಷಗಾನ ಕಲಾರಂಗ ಉಡುಪಿ ಇವುಗಳ ಸಹಯೋಗದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಆವರಣದಲ್ಲಿ ಆಯೋಜಿಸಿದ ಎಂಟು ಶಾಲೆಗಳ ಪ್ರದರ್ಶನವು ದಿನಾಂಕ 08 ಡಿಸೆಂಬರ್ 2025ರಂದು ಉದ್ಘಾಟನೆಗೊಂಡಿತು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ. ಸಿ. ಕೋಟ್ಯಾನ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಬಾಲ್ಯದಲ್ಲಿ ತಾನು ವೇಷ ಮಾಡಿದ ಹೃದ್ಯ ಅನುಭವವನ್ನು ನೆನಪಿಸಿಕೊಂಡರು. ಮಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಕುಲ ಸಚಿವ ಡಾ. ಚಂದ್ರಶೇಖರ ಶೆಟ್ಟಿಯವರು ಮಾತನಾಡಿ “ಯಕ್ಷಗಾನವು ಸಂಗೀತ, ಸಾಹಿತ್ಯ, ಕುಣಿತ, ನಾಟ್ಯ, ಮಾತುಗಾರಿಕೆ ಎಲ್ಲವನ್ನೂ ಒಳಗೊಂಡಿರುವ ಪರಿಪೂರ್ಣ ಕಲಾಪ್ರಕಾರವಾಗಿದೆ” ಎಂದರು. ದೇವಳದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ ಕುಮಾರ್, ಕೋಟೆಕಾರು ಕಲಾ ಗಂಗೋತ್ರಿಯ ಸದಾಶಿವ, ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾರಂಗದ ನಟರಾಜ ಉಪಾಧ್ಯ, ಗಣೇಶ ರಾವ್ ಎಲ್ಲೂರು ಉಪಸ್ಥಿತರಿದ್ದರು. ಟ್ರಸ್ಟಿ ವಿ.ಜಿ. ಶೆಟ್ಟಿ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ವಂದಿಸಿದರು. ಕಾಪು ಮಹಾದೇವಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಶ್ರೀ ಮಹಾಗಣಪತಿ ಲಲಿತೋಪಾಖ್ಯಾನ’ ಹಾಗೂ ಕಾಪು ದಂಡತೀರ್ಥ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ಮೀನಾಕ್ಷಿ ಕಲ್ಯಾಣ’ ಪ್ರಸಂಗ ಸೊಗಸಾಗಿ ಪ್ರಸ್ತುತಗೊಂಡಿತು.

