ಕುಂದಾಪುರ : ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಇವರ ಹೆಸರಿನಲ್ಲಿ ನೀಡುವ 2025-26ರ ಸಾಲಿನ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನ್ ದಾಸ್ ಶೆಣೈಯವರನ್ನು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಆಯ್ಕೆ ಮಾಡಿದೆ.
ದಿ. ಗೋವಿಂದರಾಯ ಶೆಣೈ ಹಾಗೂ ದಿ. ಮುಕ್ತಾ ಶೆಣೈಯವರ ಪುತ್ರರಾಗಿ 1950 ಫೆಬ್ರವರಿ 10ರಂದು ಜನಿಸಿದ ಇವರು ಶಂಕರನಾರಾಯಣ ಜೂನಿಯರ್ ಕಾಲೇಜಿನಲ್ಲಿ ಪಿ.ಯು.ಸಿ. ತನಕ ವಿದ್ಯಾಭ್ಯಾಸ ಪಡೆದರು. ನಂತರ ಬೈಲೂರು ರಾಮರಾಯ ಮಂಜುನಾಥ ಶ್ಯಾನುಭಾಗ್‌ರಲ್ಲಿ ಬರ್ಮಾಶೆಲ್ ಡಿಪೋದಲ್ಲಿ ಕ್ಲರ್ಕ್ ಆಗಿ ಸೇರ್ಪಡೆಗೊಂಡರು. ಇವರಿಗೆ ತಂದೆಯವರೇ ಯಕ್ಷಗಾನದ ಪ್ರಪ್ರಥಮ ಗುರುಗಳು. ನಂತರ ಹಿರಿಯಡಕ, ಪೆರ್ಡೂರು, ಮೂಲ್ಕಿ, ಸಾಲಿಗ್ರಾಮ, ಕಮಲಶಿಲೆ, ಮಂದಾರ್ತಿ, ಅಮೃತೇಶ್ವರಿ ಮೇಳಗಳಲ್ಲಿ ವೇಷಧಾರಿಗಳಾಗಿ ತಿರುಗಾಟ ನಡೆಸಿದರು. ಸುಧನ್ವ, ಶ್ರೀರಾಮ, ಕೃಷ್ಣ ಜಾಂಬವ, ಕೌರವ, ದಶರಥ, ವಾಲಿ, ರಾವಣ, ನಾರದ, ಅಕ್ರೂರ, ಋತುಪರ್ಣ, ಬಾಹುಕ ಮುಂತಾದ ಪಾತ್ರಗಳನ್ನು ನಿರ್ವಹಿಸಿ ಜನಮನ್ನಣೆ ಗಳಿಸಿದರು. ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯಲ್ಲೂ ಅರ್ಥಧಾರಿಗಳಾಗಿ ದೇಶ ವಿದೇಶ ಪ್ರವಾಸ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ದ್ರೋಣಾಚಾರ್ಯ ಪ್ರಶಸ್ತಿ, ಜಿ.ಎಸ್.ಬಿ. ಕಲಾರತ್ನ, ಬೈಕಾಡ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ಸಮ್ಮಾನ ಪಡೆದ ಪ್ರತಿಭಾವಂತ ಯಕ್ಷಗಾನ ಕಲಾವಿದರು.
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಹನ್ನೊಂದನೇ ವಾರ್ಷಿಕೋತ್ಸವವು ದಿನಾಂಕ 25 ಜನವರಿ 2026ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದ್ದು, ಆ ಸಂದರ್ಭದಲ್ಲಿ ಭಾಗವಹಿಸುವ ವಿಶೇಷ ಗಣ್ಯರಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ತಿಳಿಸಿದ್ದಾರೆ.
