ಮಂಗಳೂರು : ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾ ಕೇಂದ್ರದಿಂದ 2025-26ನೇ ಸಾಲಿನ ಪ್ರತಿಷ್ಠಿತ ‘ಬಾಬು ಕುಡ್ತಡ್ಕ ಪ್ರಶಸ್ತಿ’ಯನ್ನು ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡರಿಗೆ ಪ್ರದಾನ ಮಾಡಲಾಯಿತು. ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಹಯೋಗದಲ್ಲಿ ದಿನಾಂಕ 07 ಡಿಸೆಂಬರ್ 2025ರಂದು ಮಂಗಳಾದೇವಿಯ ರಾಮಕೃಷ್ಣಮಠದ ವಿವೇಕಾನಂದ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು.
ಪ್ರಶಸ್ತಿ ಸ್ವೀಕರಿಸಿ ಕುಮಾರ ಗೌಡರು “ಯಕ್ಷರಂಗದ ಧೀಮಂತ ಪ್ರತಿಭೆ ಕುಡ್ತಡ್ಕ ಬಾಬಣ್ಣನ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಬಾಬಣ್ಣ ಮತ್ತು ನಾನು ಅಣ್ಣ ತಮ್ಮಂದಿರ ಹಾಗೆ ಆತ್ಮೀಯತೆಯಿಂದ ಯಕ್ಷರಂಗದ ಮೇಲೆ ಸೇವೆ ಸಲ್ಲಿಸಿದ್ದೇವೆ” ಎಂದು ಸ್ಮರಿಸಿದರು.
ಇದೇ ವೇಳೆ ಬಾಬು ಕುಡ್ತಡ್ಕ ಇವರ ಕಿರಿಯ ಪುತ್ರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ‘ಸುಬೇದಾರ್’ ರಾಘವೇಂದ್ರ ಕುಡ್ತಡ್ಕ ಇವರನ್ನು ಸನ್ಮಾನಿಸಲಾಯಿತು. ಕಲಾಕೇಂದ್ರದ ಅಧ್ಯಕ್ಷೆ ಲಲಿತಾ ಗೌಡ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕೃಷ್ಣ ಮಠದ ಬಾಲಕಾಶ್ರಮದ ನಿರ್ವಾಹಕ ಸ್ವಾಮಿ ಯುಗೇಶಾನಂದ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಲೆಕ್ಕಪರಿಶೋಧಕ ಎ. ಕೃಷ್ಣಮೂರ್ತಿ, ಉದ್ಯಮಿ ಆರ್. ದಿನೇಶ್ ಶೆಟ್ಟಿ, ಪ್ರತಿಭಾ ಕುಡ್ತಡ್ಕ, ಸಾಂಸ್ಕೃತಿಕ ಕಲಾ ಪೋಷಕಿ ಗಾಯತ್ರಿ ದೇವಿ, ಸಂಸ್ಥೆಯ ಗೌರವಾಧ್ಯಕ್ಷ ಬಿ. ಪ್ರಕಾಶ್ ಪೈ, ನಿಟಕ ಪೂರ್ವ ಅಧ್ಯಕ್ಷ ಕಿರಣ್ ರೈ, ನಿರೂಪಕಿ ಡಾ. ಪ್ರಿಯಾ ಹರೀಶ್ ಉಪಸ್ಥಿತರಿದ್ದರು. ಸಂತೋಷ್ ಪಡೀಲ್ ಸ್ವಾಗತಿಸಿ, ಕೇಂದ್ರದ ಸಂಚಾಲಕ ಕೆ.ಸಿ. ಹರಿಶ್ಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ‘ಶಾಂಭವಿ ವಿಜಯ’ ಯಕ್ಷಗಾನ ತಾಳಮದ್ದಲೆ ನಡೆಯಿತು.
