ಗಿಡದಲ್ಲರಳಿದ ಗೊಂಚಲು ಗೊಂಚಲು ಗುಲಾಬಿ ಕಂಡಾಗ
ಮರಳುತ್ತದೆ ನನ್ನ ಮನ ಬಾಲ್ಯದತ್ತ
ಆಹಾ ಅದೆಂತಹ ಅದ್ಭುತ ಬಾಲ್ಯ
ಒಂದೇ ಮನೆಯಲ್ಲಿ ಹತ್ತಾರು ಮಕ್ಕಳು
ದೊಡ್ಡಪ್ಪನ ಮಕ್ಕಳು ಚಿಕ್ಕಪ್ಪನ ಮಕ್ಕಳು
ಎಲ್ಲರೂ ಒಟ್ಟಾಗಿ ಅಂಗಳದಲ್ಲಿ ಆಡುವಾಗ
ಏನು ಮೋಜು ಏನು ಮೋಜು
ಕಿತ್ತಾಟ ಕಚ್ಚಾಟ ಮತ್ತೆ ಒಟ್ಟುಗೂಡಿ ಆಟ
ಬಾಲ್ಯವೆಂದರೆ ಹಾಗೇ ಅಲ್ಲವೇ
ಅವ ಹಿರಿಯವ ಇವ ಕಿರಿಯವ
ಎಂಬ ಭಾವ ಮೂಡುವುದೇ ಇಲ್ಲ
ಅವ ಅಣ್ಣನ ಮಗ ಇವ ತಮ್ಮನ ಮಗ ಎಂಬ ಭೇದವಿಲ್ಲ
ನಾವೆಲ್ಲರೂ ಒಂದು ಎಂಬ ಸದ್ಭಾವ
ನಾವು ಕಚ್ಚಾಡಿದರೆ ನಾವು ಜಗಳಾಡಿದರೆ
ಎಂದೂ ಬರುತ್ತಿರಲಿಲ್ಲ
ನಮ್ಮ ಮಧ್ಯೆ ಹಿರಿಯರು
ನಾವು ನಾವೇ ಜಗಳಾಡಿ
ಮತ್ತೆ ಮರೆತು ಒಂದುಗೂಡಿ
ಆಡುತ್ತಿದ್ದ ಆ ದಿನಗಳು ಎಷ್ಟು ಚೆಂದ
ಅಂದು ನೋವಿರಲಿಲ್ಲ ಎಂಬ ತೀರ್ಮಾನ ಬೇಡ
ಹೂವಿನ ಮುಂದೆ ಮುಳ್ಳಿರುವಂತೆ
ನಮಗೂ ಹಲವು ನೋವುಗಳಿದ್ದರೂ
ಅರಳಿದ ಗುಲಾಬಿಗಳಂತೆ ನೋವ ಮರೆತು ಸದಾ ನಗುತ್ತಿದ್ದೆವು
ಆ ದಿನಗಳು ಆ ಬದುಕು ಎಷ್ಟು ಚಂದ
ಅ ಬಾಲ್ಯ ಮತ್ತೆ ಮರಳಿ ಬರಬಾರದೇ ಎಂಬ ಬಯಕೆಯಿಂದ
ಬಾಲ್ಯ ಮತ್ತೆ ಮರಳಿ ಬಾರದೆಂಬ
ವಿವೇಕದ ಉತ್ತರದಿಂದ ವಾಸ್ತವಕ್ಕೆ ಬರುತ್ತೇನೆ
ಜೀವನ ಚಕ್ರದೊಂದಿಗೆ ನಡೆಯುತ್ತೇನೆ.

ಕವಯತ್ರಿ : ಸಾವಿತ್ರಿ ಮನೋಹರ್ ಕಾರ್ಕಳ
