ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಘಟಕ, ಸುರತ್ಕಲ್ ಹೋಬಳಿ ಘಟಕ ಇವರ ಆಶ್ರಯದಲ್ಲಿ ಮತ್ತು ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸುರತ್ಕಲ್ ಹೋಬಳಿ ಮಟ್ಟದ ‘ಕನ್ನಡ ಸಾಹಿತ್ಯ ಸಮ್ಮೇಳನ’ವು ದಿನಾಂಕ 11 ಡಿಸೆಂಬರ್ 2025ರಂದು ಕಾಟಿಪಳ್ಳ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ವಠಾರದಲ್ಲಿ ನಡೆಯಿತು.
ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಸಾಹಿತಿ, ರಂಗಕರ್ಮಿ ಗೀತಾ ಸುರತ್ಕಲ್ ಇವರು ಮಾತನಾಡಿ “ಸುರತ್ಕಲ್ ಸಾರಸ್ವತ ಲೋಕಕ್ಕೆ ಕೊಟ್ಟ ಕಾಣಿಕೆ ಸ್ವಲ್ಪವಲ್ಲ ವಿದ್ಯಾಸಂಸ್ಥೆಗಳಿಂದ ಹಿಡಿದು ಸಾಹಿತಿಕ, ಬೌದ್ಧಿಕ, ಸಾಂಸ್ಕೃತಿಕ, ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ನಾಡು ನುಡಿಯ ಸಂಭ್ರಮದ ಜಾತ್ರೆಯಾಗದೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಹೆಚ್ಚು ಅರ್ಥವತ್ತಾಗಿ ವಿಜೃಂಬಿಸಬೇಕಿದೆ” ಎಂದು ಅಭಿಪ್ರಾಯಪಟ್ಟರು.

ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಸಮ್ಮೇಳನದ ಮೆರವಣಿಗೆ ಆರಂಭವಾಯಿತು. ಶ್ರೀ ಕ್ಷೇತ್ರದ ಆಡಳಿತ ಅಧಿಕಾರಿ ನವೀನ್ ಕುಮಾರ್ ಚಾಲನೆ ನೀಡಿದರು. ತೆರೆದ ಜೀಪಿನಲ್ಲಿ ಸಮ್ಮೇಳನ ಅಧ್ಯಕ್ಷರನ್ನು ಕುಳ್ಳಿರಿಸಿ, ಚೆಂಡೆ, ಕುಣಿತ ಭಜನೆ, ಸೌಟ್ ಆ್ಯಂಡ್ ಗೈಡ್ ವಿದ್ಯಾರ್ಥಿಗಳ ಬ್ಯಾಂಡ್ ವಾದನ, ಕಲಶ, ವಿದ್ಯಾರ್ಥಿನಿಯರ, ವಿದ್ಯಾರ್ಥಿಗಳ ಶಿಸ್ತುಬದ್ದ ಮೆರವಣಿಗೆ ಶಾಲೆಯ ವಠಾರದವರೆಗೆ ಸಾಗಿತು. ಶಿಕ್ಷಕರ ಸಮೂಹ, ವಿದ್ಯಾರ್ಥಿಗಳ ಹೆತ್ತವರು, ಸಾಹಿತಿಗಳು ಮೆರವಣಿಗೆಯಲ್ಲಿ ಭಾಗಿಯಾದರು.
ಸಮ್ಮೇಳನ ಉದ್ಘಾಟನೆಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕರ್ಮಯೋಗಿ ಡಾ. ಹರಿಕೃಷ್ಣ ಪುನರೂರು ನೆರವೇರಿಸಿ, “ಇಂದು ಕರ್ನಾಟಕದಲ್ಲಿ ನಾಮಫಲಕ ಇಂಗ್ಲೀಷ್ ಭಾಷೆಯಲ್ಲಿರುತ್ತದೆ. ಕನ್ನಡ ಶಾಲೆಗೆ ಸರಕಾರದಿಂದಲೇ ಪ್ರೋತ್ಸಾಹ ದೊರಕದಂತಾಗಿದೆ. ಮನೆಯಲ್ಲಿ ತಂದೆ ತಾಯಿಗಳು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವಂತಾಗಿದೆ. ಇದು ಸಲ್ಲದು, ಅಂಗ್ಲ ಭಾಷೆಗೆ ಸೇರಿಸಿದರೂ ಮನೆಯಲ್ಲಿ ತುಳು ಭಾಷೆಯ ಜತೆಗೆ ಕನ್ನಡವನ್ನು ಕಲಿಸಿ, ಮಾತೃ ಭಾಷೆಯ ಅಭಿಮಾನವನ್ನು ಬೆಳೆಸಿ” ಎಂದು ಕರೆ ನೀಡಿದರು.
ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪಿ. ದಯಾಕರ್, ದಕ್ಷಿಣ ಕನ್ನಡ ಜಿ.ಸಾ.ಪ. ಅಧ್ಯಕ್ಷ ಎಂ. ಪಿ. ಶ್ರೀನಾಥ್, ತಾಲೂಕು ಅಧ್ಯಕ್ಷ ಮಂಜುನಾಥ ರೇವಣ್ಕರ್ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಪುಸ್ತಕ ಪ್ರದರ್ಶನದ ಮಳಿಗೆಯ ಉದ್ಘಾಟನೆಯನ್ನು ಉದ್ಯಮಿ ಧರ್ಮೇಂದ್ರ ಗಣೇಶಪುರ ಮಾಡಿದರು. ‘ಭಾರತದ ಸಂತ ತತ್ತ್ವಗಳು ಮತ್ತು ನಾರಾಯಣ ಗುರುಗಳ ತತ್ತ್ವಗಳು’ ಎಂಬ ವಿಷಯದ ಬಗ್ಗೆ ಸುರತ್ಕಲ್ ಹೋಬಳಿ ಅಧ್ಯಕ್ಷೆ ಅವರ ಗುಣವತಿ ರಮೇಶ್ ಇವರ ಕೃತಿಯನ್ನು ಪ್ರಭಾಕರ ನೀರುಮಾರ್ಗ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಸಾಧನಾ ಸಿರಿ ಪ್ರಶಸ್ತಿ, ಸಾಧಕರಿಗೆ ಗೌರವ, ಕವಿಗೋಷ್ಠಿಗಳು ನಡೆಯಿತು.
ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಇವರ ವತಿಯಿಂದ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಧನುರಾಜ್ ಅತ್ತಾವರ ಇವರ ನೇತೃತ್ವದಲ್ಲಿ ಸುಗಮ ಸಂಗೀತ ಕಾರ್ಯಕ್ರಮವು ನಡೆಯಿತು. ಹಿರಿಯ ಗಾಯಕರಾದ ಮುರಳೀಧರ ಕಾಮತ್, ರವೀಂದ್ರ ಪ್ರಭು, ರಾಮ್ ಕುಮಾರ್, ಮಿಥುನ್ ರಾಜ್, ಉದಯ ಕುಮಾರ್, ಗಾಯಕಿಯರಾದ ಮಲ್ಲಿಕಾ ಶೆಟ್ಟಿ, ಹರಿಣಾಕ್ಷಿ, ಶೀಲಾ ಪಡೀಲ್ ಭಾವಗೀತೆಗಳನ್ನು ಹಾಡಿದರು. ಸಂಗೀತ ವಾದಕರಾಗಿ ಸತೀಶ್ ಸುರತ್ಕಲ್, ಶಶಿಧರ್ ಹೆಜಮಾಡಿ, ಗಣೇಶ್ ನವಗಿರಿ, ಪ್ರಥಮ್ ಆಚಾರ್ಯ ಸಹಕರಿಸಿದರು. ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಅಧ್ಯಕ್ಷ ಧನುರಾಜ್ ಅತ್ತಾವರರನ್ನು ಕಲಾವಿದರ ಪರವಾಗಿ ಅಭಿನಂದಿಸಲಾಯಿತು.

ಸಾಹಿತಿಗಳಾದ ಶಕುಂತಲಾ ಭಟ್, ಶಶಿಲೇಖ ಬಿ., ಡಾ. ಮೀನಾಕ್ಷಿ ರಾಮಚಂದ್ರ, ಸಂಸ್ಥೆಯ ಆಡಳಿತ ಅಧಿಕಾರಿ ಗಣೇಶ್ ಅಮೀನ್ ಸಂಕಮಾರ್, ಉಮೇಶ್ ಕರ್ಕೇರ, ಮಾಜಿ ಹೋಬಳಿ ಘಟಕ ಅಧ್ಯಕ್ಷ ವಿನಯ ಆಚಾರ್ಯ, ಪ್ರೊ. ಕೃಷ್ಣಮೂರ್ತಿ, ಸನತ್ ಕುಮಾರ್‌ಜೈನ್, ಸಂಸ್ಥೆಯ ಟ್ರಸ್ಟಿಗಳಾದ ಅರುಣ್ ಕುಮಾರ್, ಭೋಜ ಅಂಚನ್ ಮಧ್ಯ, ರಾಜಾರಾಮ್ ಸಾಲ್ಯಾನ್, ಆನಂದ ಅಮೀನ್, ದೀಪಕ್ ಪೆರ್ಮುದೆ ಮತ್ತಿತರರು ಉಪಸ್ಥಿತರಿದ್ದರು. ಸುರತ್ಕಲ್ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಗುಣವತಿ ರಮೇಶ್ ಸ್ವಾಗತಿಸಿ, ವೀಣಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

