ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರಕಾರಿ ಪ್ರ.ದ. ಕಾಲೇಜು ಕೊಡಿಯಾಲಬೈಲು ಸುಳ್ಯ, ಆಂತರಿಕ ಗುಣಮಟ್ಟ ಭರವಸ ಕೋಶ, ಸಂಕಲ್ಪ ಕನ್ನಡ ಸಂಘ ಕನ್ನಡ ವಿಭಾಗ ಇದರ ಸಹಯೋಗದಲ್ಲಿ ಸ. ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಹಾಗೂ ಡಾ.ಪ್ರಭಾಕರ ಶಿಶಿಲರವರ ‘ಅಮರ ಸುಳ್ಯದ ಕ್ರಾಂತಿ 1837’ ನಾಟಕ ಕೃತಿಯನ್ನು ಮೇ.5 ರಂದು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ. ಆರ್. ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕ.ಸಾ.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ‘ಕನ್ನಡದ ಅಸ್ಮಿತ-ಕನ್ನಡ ಸಾಹಿತ್ಯ ಪರಿಷತ್ತು’ ಈ ವಿಷಯದ ಬಗ್ಗೆ ಖ್ಯಾತ ಸಾಹಿತಿ ಡಾ. ಪ್ರಭಾಕರ ಶಿಶಿಲ ಉಪನ್ಯಾಸ ನೀಡಿದರು. “ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕರ್ನಾಟಕ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಆಗಿ ಬದಲಾವಣೆಯಾಯಿತು. ಜಾಗತೀಕರಣ ಮತ್ತು ಕೋಮುವಾದದಿಂದಾಗಿ ಕನ್ನಡದ ಅಸ್ಮಿತೆಗೆ ತೊಂದರೆಯುಂಟಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಆಡಳಿತ ಸರಕಾರಕ್ಕೆ ನಿಷ್ಠೆ ಇರುವ ಸಾಹಿತಿಗಳ ಆಯ್ಕೆಯಿಂದಾಗಿ ಅರ್ಹ ಸಾಹಿತಿಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ವಿಕೇಂದ್ರೀಕರಣಗೊಂಡಾಗ ಇನ್ನಷ್ಟು ಸಾಹಿತಿಗಳಿಗೆ ಅವಕಾಶವಾಗುತ್ತದೆ. ಕನ್ನಡ ಪುಸ್ತಕಗಳನ್ನು ಕೊಂಡು ಓದುವಂತೆ ಮಾಡುವ ಜವಾಬ್ದಾರಿಯನ್ನು ಸಾಹಿತ್ಯ ಪರಿಷತ್ ವಹಿಸಿಕೊಳ್ಳಬೇಕು. ತರಗತಿಗಳಲ್ಲಿ ಕನ್ನಡ ಪುಸ್ತಕಗಳ ವಿಮರ್ಶೆ ನಡೆಯಬೇಕು” ಎಂದು ಡಾ.ಶಿಶಿಲ ಹೇಳಿದರು.
ಶಿಶಿಲ ಅವರ ನಾಟಕ ‘ಅಮರ ಸುಳ್ಯ ಕ್ರಾಂತಿ 1837’ ಇದರ ಕೃತಿ ಬಿಡುಗಡೆಯನ್ನು ಸುಳ್ಯ ಸ.ಪ್ರ.ದ.ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಶಿ ಮಾಡಿದರು. ಜಿಲ್ಲಾ ಕಸಾಪ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಕಾಲೇಜಿನ ‘ಆಂತರಿಕ ಗುಣಮಟ್ಟ ಭರವಸ ಕೋಶ’ದ ಸಂಯೋಜಕರಾದ ಡಾ. ಜಯಶ್ರೀ ಕೆ, ಕ.ಸಾ.ಪ. ಗೌರವ ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ.ಸಾ.ಪ.ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಸ್ವಾಗತಿಸಿ, ಶ್ರೀಮತಿ ಚಂದ್ರಮತಿ ಕೆ. ವಂದಿಸಿದರು. ಕ.ಸಾ.ಪ. ನಿರ್ದೇಶಕಿ ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಕೃತಿಯ ಬಗ್ಗೆ:
ಡಾ. ಪ್ರಭಾಕರ ಶಿಶಿಲ ಅವರ “ಅಮರ ಸುಳ್ಯದ ಕ್ರಾಂತಿ 1837” ಭಾರತ ಸ್ವತಂತ್ರದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಅಖಿಲ ಕರ್ನಾಟಕ ಮಟ್ಟದ ಐತಿಹಾಸಿಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಗಳಿಸಿದಂತಹ ಈ ಕೃತಿಯನ್ನು ಡಾಕ್ಟರ್ ಲೀಲಾಧರ ಧೋಳ, ಶರಪ್ರಕಾಶನ ಸುಳ್ಯ ಇವರು ಪ್ರಕಟಿಸಿದ್ದಾರೆ. 2023ರಲ್ಲಿ ಇದು ಮುದ್ರಣಗೊಂಡಿದೆ. 98 ಪುಟಗಳ ನಾಟಕ ಕೃತಿ. ಈ ನಾಟಕದಲ್ಲಿ ಒಟ್ಟು 32 ಪಾತ್ರಗಳಿವೆ, ನಿಜವಾಗಿ ನಾಟಕ ಆರಂಭವಾಗುವುದು 25ನೇ ಪುಟದಿಂದ. 70 ಪುಟಗಳ ವಿಸ್ತಾರವನ್ನ ನಾಟಕ ಹೊಂದಿದೆ. ಒಟ್ಟು ದೃಶ್ಯಗಳು 16. ಮೂರು ಸ್ತ್ರೀ ಪಾತ್ರಗಳಿವೆ. ಸ್ವಾತಂತ್ರ್ಯದ ಸಂಗ್ರಾಮದಲ್ಲಿ ಸ್ತ್ರೀಯರಿಗೂ ಕೂಡ ಪ್ರವೇಶಿಕೆ ಇತ್ತು ಅನ್ನೋದಕ್ಕೆ ಆ ಮೂರು ಪಾತ್ರಗಳು ನಮಗೆ ನಿದರ್ಶನವಾಗುತ್ತವೆ. ಮುತ್ತಮ್ಮ ಕೆದಂಬಾಡಿ ರಾಮಯ್ಯ ಗೌಡರ ಪತ್ನಿ, ಸೊಸೆ ಗಂಗಮ್ಮ, ಪುಟ್ಟ ಬಸವಣ್ಣ ಅತ್ತೆ .ನಾಟಕದ ಆರಂಭಕ್ಕೂ ಮುನ್ನ ಹಿನ್ನೆಲೆಯಾಗಿ ಕಥಾಸಾರವನ್ನು ನೀಡಿರುವುದು ಓದುಗರಿಗೆ ಪೂರಕವಾಗುತ್ತದೆ. ಅಮರ ಸುಳ್ಯದ ರೈತರು ದಂಗೆ ಏಳಲು ಪ್ರಮುಖವಾಗಿ ನಾಲ್ಕು ಕಾರಣಗಳನ್ನು ಲೇಖಕರು ಗುರುತಿಸುತ್ತಾರೆ. ಬ್ರಿಟಿಷರಿಂದ 1. 1834ರಲ್ಲಿ ಕೊಡಗಿನ ಅರಸ ಚಿಕ್ಕವೀರರಾಜೇಂದ್ರನ ಪದಚುತಿಗೊಳಿಸಲಾಯಿತು. 2. ಪುತ್ತೂರು ಮತ್ತು ಸುಳ್ಯಗಳ ನೂರಹತ್ತು ಗ್ರಾಮಗಳನ್ನು ಕೊಡಗಿನಿಂದ ಬೇರ್ಪಡಿಸಿ ಕೆನರಾ ಜಿಲ್ಲೆಗೆ ಸೇರಿಸಿದ್ದು. 3. ಕಂದಾಯವಾಗಿ ಉತ್ಪತ್ತಿಯ ಶೇಕಡಾ 50 ಭಾಗವನ್ನು ಹಣದ ರೂಪದಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಕಟ್ಟಬೇಕೆಂಬ ಆದೇಶ. 4. ಉಪ್ಪು ಮತ್ತು ಹೊಗೆಸೊಪ್ಪುಗಳ ಉತ್ಪಾದನೆಯ ಏಕಸೌಮ್ಯವನ್ನು ಸರ್ಕಾರವೇ ತನ್ನ ವಶಕ್ಕೆ ತೆಗೆದುಕೊಂಡಿದ್ದು.
ಮೊದಲಿಗೆ ಕ್ರಾಂತಿಯ ಮುಂದಾಳುಗಳಾಗಿದಂತಹ ಹುಲಿ ಕಡೆದ ನಂಜಯ್ಯ ಅಪರಾಂ ಪರ ಕಲ್ಯಾಣ ಸ್ವಾಮಿ, ಪುಟ್ಟಬಸವ ಇವರಿಂದ ಮುಂದೆ ಸಾಗುವ ಕ್ರಾಂತಿ ಕೋಲ್ಚಾರು ಕೂಸಪ್ಪ ಗೌಡರ ಕಂದಾಯ ನಿರಾಕರಣೆ ಚಳುವಳಿಯೊಂದಿಗೆ ಅಮರ ಸುಳ್ಯದ ಸ್ವತಂತ್ರ ಹೋರಾಟ ಅಂತ್ಯವಾಗುತ್ತೆ. ನಾಟಕದಲ್ಲಿ ಓದುಗರ ಏಕತಾನತೆಯನ್ನು ತಪ್ಪಿಸಲು ಹಾಡುಗಳ ಬಳಕೆಯಾಗಿದೆ. ಅರಬ್ಬಿ ಸಮುದ್ರದ ಮೊರೆತಕ್ಕೆ ಅಮರಕ್ರಾಂತಿಯ ಕಹಳೆ ಮೊಳಗನ್ನ ಸಾದೃಶಗೊಳಿಸುವಲ್ಲಿ ಲೇಖಕರ ಸೃಜನಶೀಲತೆಯ ಗರಿ ಬಿಚ್ಚಿದೆ. ದೇಶದ ಸ್ವತಂತ್ರಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದೆ.
ಸ್ವಾತಂತ್ರ್ಯ ಅನ್ನೋದು ದೇವರಿಗಿಂತ ದೊಡ್ಡ ಮೌಲ್ಯ ಎನ್ನುವುದು ಲೇಖಕರ ಅಭಿಮತವಾಗಿದೆ. ನಾಟಕದ ಕೊನೆಗೆ ನಾವು ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಛಲ ಓದುಗರಲ್ಲಿ ಬರುತ್ತದೆ. ಇದು ಕೃತಿಯ ಯಶಸ್ಸಿಗೆ ಕಾರಣವೆನಿಸುತ್ತೆ. ಈ ಕೃತಿಯಲ್ಲಿ ಈ ನೆಲದ ಮಣ್ಣಿನ ವಾಸನೆ ಇದೆ. ಪ್ರಾದೇಶಿಕ ಸಂಸ್ಕೃತಿಯ ಅನಾವರಣವಿದೆ. ಸ್ವಾತಂತ್ರ್ಯ ಚಳುವಳಿಯ ಒಂದು ಭಾಗವಾಗಿ ಅಮರ ಸುಳ್ಯ ರೈತರ ಕ್ರಾಂತಿ ಮಹತ್ವದ ಪಾತ್ರವನ್ನು ವಹಿಸಿದೆ. ಕೃತಿಯ ಬೆನ್ನುಡಿಯಲ್ಲಿ ಮಹತ್ವದ ಆಯ್ದ ಸಾಲುಗಳನ್ನು ನೀಡಲಾಗಿದೆ. 1837ರ ಮಾರ್ಚ್ 30ರಿಂದ ಏಪ್ರಿಲ್ 5ರವರೆಗೆ ನಡೆದ ಅಮರ ಸುಳ್ಯ ರೈತ ಕ್ರಾಂತಿ ಇತಿಹಾಸದ ಪುಟಗಳಲ್ಲಿ ಕಲ್ಯಾಣಪ್ಪನ ಕಾಟ ಕಾಯಿ ಅಮರ ಸುಳ್ಯ ರೈತ ಹೋರಾಟ ಕೊಡಗು ಕೆನರಾ ಬಂಡಾಯ ಇತ್ಯಾದಿ ಹೆಸರುಗಳಿಂದ ದಾಖಲಾಗಿದೆ. ಆರಂಭದಲ್ಲಿ ವಿಜಯ್ಗಳಾದ ಅಮರ ಸುಳ್ಯದ ರೈತರು ತುಳುನಾಡನ್ನು ಎರಡು ವಾರಗಳ ಪರಿಯಂತ ಆಳಿದರು. ಆ ಬಳಿಕ ಬಂದ ಬ್ರಿಟಿಷರ ಬೃಹತ್ ಸೇನೆ ಎದುರು ಸೋಲದಿರುತ್ತಿದ್ದರೆ ಆಗಲೇ ದಕ್ಷಿಣ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತು.